ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ವಿದ್ಯಾಕಾಶಿ ಧಾರವಾಡ ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಲ್ಲ. ಕ್ರೀಡೆಯಲ್ಲೂ ಧಾರವಾಡ ಎತ್ತಿದ ಕೈ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಹೌದು! ಧಾರವಾಡದ ಆಸ್ಮಿರಾಬಾನು ಕಣಕಿ ಎಂಬ ಯುವತಿ ಇದೀಗ ಕರ್ನಾಟಕ ಹಿರಿಯರ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಧಾರವಾಡದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಆಸ್ಮಿರಾಬಾನು ಅವರ ಸಹೋದರರಾದ ಯಾಸೀನ್ ಕಣಕಿ ಹಾಗೂ ಅಬೂಬಕರ್ ಕಣಕಿ ಅವರೂ ಕೂಡ ಕ್ರಿಕೆಟರ್ ಆಗಿದ್ದರು. ಇವರ ಆಟವನ್ನು ನೋಡಿದ ಆಸ್ಮಿರಾಬಾನು ತಾನೂ ಕೂಡ ಕ್ರಿಕೆಟರ್ ಆಗಬೇಕು ಎಂದು ತನ್ನ ತಂದೆ ಮುಂದೆ ತನ್ನ ಆಸೆಯನ್ನು ವ್ಯಕ್ತಪಡಿಸಿದಾಗ ಅವರ ತಂದೆ ಆಸ್ಮಿರಾಬಾನು ಅವರನ್ನು ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿಗೆ ಸೇರಿಸಿ ಕ್ರಿಕೆಟ್ ತರಬೇತಿ ಕೊಡಲಾರಂಭಿಸಿದರು. ಹೀಗೆ ಆರಂಭವಾದ ಆಸ್ಮಿರಾಬಾನು ಅವರ ಕ್ರಿಕೆಟ್ ಜೀವನ ಇದೀಗ ರಾಜ್ಯಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರಿಕೆಟ್ ಜೀವನದ ಮೊದಲ ಮೆಟ್ಟಿಲೇರುವಂತೆ ಮಾಡಿದೆ.
ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ ಹಾಗೂ ಹುಬ್ಬಳ್ಳಿಯ ಸೋಮಶೇಖರ ಶಿರಗುಪ್ಪಿ ಅವರ ಬಳಿ ಆಸ್ಮಿರಾಬಾನು ಕ್ರಿಕೆಟ್ ತರಬೇತಿ ಪಡೆದಿದ್ದಾರೆ. ಧಾರವಾಡದಿಂದ ಆನಂದ ಕಟ್ಟಿ ಹಾಗೂ ಸೋಮಶೇಖರ ಶಿರಗುಪ್ಪಿ ಅವರು ರಣಜಿ ಟ್ರೋಫಿಗೆ ಆಯ್ಕೆಯಾಗಿ ಕ್ರಿಕೆಟ್ ಆಡಿದ್ದರು. ಇದೀಗ ಆಸ್ಮಿರಾಬಾನು ಅವರು ಧಾರವಾಡದಿಂದ ಕರ್ನಾಟಕ ಹಿರಿಯರ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಮೊದಲ ಮಹಿಳೆ ಆಗಿದ್ದಾಳೆ. ಗುಜರಾತ್, ಬಾಗಲಕೋಟೆ, ಅಥಣಿ, ಬೆಳಗಾವಿಯಲ್ಲಿ ಆಸ್ಮಿರಾಬಾನು ಅವರು ಕ್ರಿಕೆಟ್ ಆಡಿ ಗಮನಸೆಳೆದು ಇದೀಗ ರಾಜ್ಯಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಏನೇ ಆಗಲಿ ಧಾರವಾಡದಿಂದ ರಾಜ್ಯಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಸ್ಮಿರಾಬಾನು ಇಡೀ ಧಾರವಾಡದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಇವರ ಕ್ರಿಕೆಟ್ ಜೀವನ ರಾಜ್ಯಮಟ್ಟಕ್ಕಷ್ಟೇ ಸೀಮಿತವಾಗದೇ ರಾಷ್ಟ್ರಮಟ್ಟದವರೆಗೂ ತಲುಪುವಂತಾಗಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಹಾರೈಕೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
PublicNext
23/10/2021 09:08 pm