ದುಬೈ: ಕೋಲ್ಕತ್ತಾ ನೈಟ್‌ರೈಡರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಎಂಟ್ರಿ ಕನಸು ಕೈಚೆಲ್ಲಿದೆ. ಈ ಮೂಲಕ ಮಾರ್ಗನ್ ನೇತೃತ್ವದ ಕೆಕೆಆರ್ 60 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 54ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 191 ರನ್ ಚಚ್ಚಿತ್ತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡವು 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲು ಶಕ್ತವಾಯಿತು. ಭರ್ಜರಿ ಗೆಲುವು ದಾಖಲಿಸಿದ ಕೆಕೆಆರ್ ಅಂಕಪಟ್ಟಿದಲ್ಲಿ 4ನೇ ಸ್ಥಾನಕ್ಕೆ ಏರಿದೆ. ಆದರೆ ಅದರ ಭವಿಷ್ಯವು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ.
ಕೆಕೆಆರ್ ನೀಡಿದ್ದ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ರಾಜಸ್ಥಾನ್ ಪರ ಜೋಸ್ ಬಟ್ಲರ್ (35 ರನ್) ಆಗೂ ರಾಹುಲ್ ತಿವಾಠಿ (31 ರನ್) ಹೊರತುಪಡಿಸಿ ಉಳಿದ ಆಟಗಾರರು ಬಹುಬೇಗ ವಿಕೆಟ್ ಕಳೆದುಕೊಂಡರು. ಇದರಿಂದಾಗಿ ರಾಜಸ್ಥಾನ್ ತಂಡವು 60 ರನ್ ಅಂತರದಿಂದ ಸೋಲು ಕಂಡಿತು. ರಾಬಿನ್ ಉತ್ತಪ್ಪ 6 ರನ್, ಬೆನ್ ಸ್ಟೋಕ್ಸ್ 18 ರನ್, ನಾಯಕ ಸ್ಟೀವ್ ಸ್ಮಿತ್ 4 ರನ್, ಸಂಜು ಸ್ಯಾಮ್ಸನ್ 1 ರನ್, ರಿಯಾನ್ ಪರಾಗ್ ಶೂನ್ಯ ರನ್, ಶ್ರೇಯಸ್ ಗೋಪಾಲ್ ಅಜೇಯ 25 ರನ್ ಗಳಿಸಿದರು.
ಕೋಲ್ಕತ್ತಾ ಪರ ಪ್ಯಾಟ್ ಕಮಿನ್ಸ್ 4 ವಿಕೆಟ್ ಪಡೆದು ಮಿಂಚಿದರೆ, ಶಿವಂ ಮಾವಿ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಕಿತ್ತು. ಉಳಿದಂತೆ ಕಮಲೇಶ್ ನಾಗರಕೋಟಿ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.
PublicNext
01/11/2020 11:24 pm