ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳಪೆ ಪ್ರದರ್ಶನದಿಂದ ಕಂಗೆಟ್ಟು ಪ್ಲೇ ಆಫ್ ಹಂತಕ್ಕೇರಲು ಸಾಧ್ಯವಾಗದೇ ಲೀಗ್ ಹಂತದಲ್ಲೇ ಹೋರಾಟ ಮುಗಿಸಿದೆ. ಹೀಗಾಗಿ ಸಿಎಸ್‌ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಆದರೆ ಸಿಎಸ್‌ಕೆ ಅಭಿಮಾನಿಗಳು ಮಾತ್ರ ನಾಯಕ ಎಂ.ಎಸ್.ಧೋನಿ ಹಾಗೂ ತಂಡಕ್ಕೆ ನೀಡುವ ಬೆಂಬಲವನ್ನು ಸ್ವಲ್ಪವೂ ಕಡಿಮೆ ಮಾಡಿಕೊಂಡಿಲ್ಲ.
ಹಾಗೆ ತಮಿಳುನಾಡಿನ ಅರಂಗೂರು ಎಂಬಲ್ಲಿನ ಗೋಪಿ ಕೃಷ್ಣನ್ ಎಂಬವವರು ಧೋನಿ ಮೇಲಿನ ಅಭಿಮಾನದಿಂದ ಸುದ್ದಿಯಾಗಿದ್ದಾರೆ.
ಗೋಪಿ ಕೃಷ್ಣನ್ ಅವರು ತಮ್ಮ ಮನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಣ್ಣವಾದ ಹಳದಿ ಹಾಗೂ ಧೋನಿಯ ಕಲಾಚಿತ್ರದಿಂದ ತುಂಬಿದ್ದಾರೆ.
ಅಷ್ಟೇ ಅಲ್ಲದೆ ಮನೆಗೆ 'ಧೋನಿಯ ಅಭಿಮಾನಿಯ ಮನೆ' ಎಂದೇ ಬರೆಸಿಕೊಂಡಿದ್ದಾರೆ. ಈ ಮನೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಿಎಸ್‌ಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ, 'ಧೋನಿಯ ಅಭಿಮಾನಿಯ ಮನೆ' ವಿಡಿಯೋವನ್ನು ಹಂಚಿಕೊಂಡಿತ್ತು.
ಈ ಬಗ್ಗೆ ಮಾತನಾಡಿದ ಎಂ.ಎಸ್.ಧೋನಿ, 'ಗೋಪಿ ಕೃಷ್ಣನ್ ಅವರ ಮನೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದ್ದೇನೆ. ಗೋಪಿ ಎಂಬವರು ನನ್ನ ಅಭಿಮಾನಿ ಅಷ್ಟೇ ಅಲ್ಲದೆ ಸಿಎಸ್‌ಕೆ ತಂಡದ ದೊಡ್ಡ ಅಭಿಮಾನಿಗಳಾಗಿದ್ದಾರೆ.
ಇಂತಹ ಕೆಲಸ ಮಾಡುವುದು ತುಂಬಾ ಸುಲಭದ ವಿಚಾರವಲ್ಲ.
ಮನೆಯವರು ಒಪ್ಪಿಗೆ ನೀಡಿದ ನಂತರವೇ ಇಂತಹ ಕೆಲಸಕ್ಕೆ ಕೈ ಹಾಕಬೇಕಾಗುತ್ತದೆ. ಹೀಗಾಗಿ ಗೋಪಿ ಕೃಷ್ಣನ್ ಹಾಗೂ ಅವರ ಕುಟುಂಬಸ್ಥರಿಗೆ ಧನ್ಯವಾದ ತಿಳಿಸುತ್ತೇನೆ' ಎಂದು ಭಾವುಕರಾದರು.
PublicNext
27/10/2020 04:28 pm