ಪಾಟ್ನಾ: ಬಿಹಾರದ ಮುಖ್ಯಮಂತ್ರಿಯಾಗಿ ಎಂಟನೇ ಬಾರಿ ಅಧಿಕಾರ ಸ್ವೀಕರಿಸಿರುವ ನಿತೀಶ್ ಕುಮಾರ್ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದಾರೆ. ಈ ಬಗ್ಗೆ ಕೇಳೋ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸುತ್ತಲೇ ಬಂದಿದ್ದಾರೆ ನಿತೀಶ್ ಕುಮಾರ್. ಈ ನಡುವೆಯೇ ಕುತೂಹಲದ ಘಟನೆಯೊಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ.
ಚಂದ್ರಶೇಖರ ರಾವ್, ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಮೂವರೂ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಚಂದ್ರಶೇಖರ ರಾವ್ ಅವರು ‘ಬಿಜೆಪಿ -ಮುಕ್ತ ಭಾರತ’ವೇ ನಮ್ಮ ಗುರಿಯಾಗಿದೆ ಎಂದರು. ಆ ತಕ್ಷಣ ಮಾಧ್ಯಮದವರು, ಹಾಗಿದ್ದರೆ ನಿತೀಶ್ ಕುಮಾರ್ ನಿಮ್ಮ ಪ್ರಧಾನಿ ಅಭ್ಯರ್ಥಿಯೇ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಕೆಸಿಆರ್ ಏನನ್ನೋ ಹೇಳಲು ಮುಂದಾದರು. ಪ್ರಧಾನಿ ಅಭ್ಯರ್ಥಿ ಎಂಬ ಪ್ರಶ್ನೆ ಕೇಳುತ್ತಲೇ ತಮಗೆಲ್ಲಿ ಈ ಪ್ರಶ್ನೆ ಕೇಳಿಬಿಡುತ್ತಾರೆ ಎಂದೋ ಏನೋ, ಕೂಡಲೇ ನಿತೀಶ್ ಕುಮಾರ್ ಕುರ್ಚಿ ಬಿಟ್ಟು ಎದ್ದು ನಿಂತರು. ಈ ಸಮಯದಲ್ಲಿ ಕುಳಿತುಕೊಳ್ಳುವಂತೆ ಕೆಸಿಆರ್ ಅವರ ಕುರ್ತಾ ಎಳೆದರು.
ಆದರೆ ನಿತೀಶ್ ಕುಮಾರ್ ಮಾತ್ರ ಕುಳಿತುಕೊಳ್ಳಲಿಲ್ಲ. ಕೆಸಿಆರ್ ಹಲವು ನಿಮಿಷ ಮಾತನಾಡುತ್ತಿದ್ದರೂ ನಿತೀಶ್ ನಿಂತುಕೊಂಡೇ ಇದ್ದ ಪ್ರಸಂಗ ಜರುಗಿತು. ನಿತೀಶ್ ಜೀ ಕುಳಿತುಕೊಳ್ಳಿ ಎಂದರೂ ಕೇಳಲಿಲ್ಲ. ಬದಲಿಗೆ ನಗುತ್ತಲೇ ಇದ್ದರು. ಇದು ಏಕೆ ಎಂಬ ಬಗ್ಗೆ ಮಾತ್ರ ಅವರು ಬಾಯಿ ಪಿಟಕ್ ಎನ್ನದೇ ನಗು ಮುಂದುವರೆಸಿದ್ದರು.
PublicNext
01/09/2022 06:49 pm