ದಾವಣಗೆರೆ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರ ಸ್ವಾಮೀಜಿ ವಿರುದ್ಧ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಪ್ರತಿಭಟನೆ ನಡೆಸಿತು.
ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು ಶ್ರೀಗಳ ವಿರುದ್ಧ ಘೋಷಣೆ ಹಾಕಿದರು. ಪ್ರತಿಭಟನೆ ವೇಳೆ ಮುರುಘಾ ಶರಣರ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಪ್ರತಿಭಟನಾಕಾರರನ್ನು ಸ್ಥಳದಲ್ಲಿದ್ದ ಪೊಲೀಸರು ತಡೆದರು. ಈ ವೇಳೆ ಪೊಲೀಸರ ಜೊತೆ ಮಾತಿನ ಚಕಮಕಿಯೂ ನಡೆಯಿತು. ಕೊನೆಗೂ ಶ್ರೀಗಳ ಭಾವಚಿತ್ರ ಸುಟ್ಟುಹಾಕಲು ಬಿಡಲಿಲ್ಲ.
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಾಮಾನ್ಯವಾದದ್ದಲ್ಲ. ಹಾಸ್ಟೆಲ್ ನಲ್ಲಿ ಮಕ್ಕಳನ್ನು ಪೋಷಕರು ಓದಲು ಬಿಡುತ್ತಾರೆ. ಸಮಾಜಕ್ಕೆ ಮಾದರಿಯಾಗಬೇಕಿದ್ದ ಶ್ರೀಗಳ ಮೇಲೆ ಇಂಥ ಗಂಭೀರ ಆರೋಪ ಕೇಳಿ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗಲೇಬೇಕು. ಸಾಮಾನ್ಯರಿಗೊಂದು ನ್ಯಾಯ, ಬಲಿಷ್ಠರಿಗೊಂದು ನ್ಯಾಯ ಎಂಬಂತಾಗಬಾರದು. ಶ್ರೀಗಳು ತಪ್ಪೆಸಗಿದ್ದೇ ಆದರೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
PublicNext
30/08/2022 06:34 pm