ಅಹಮದಾಬಾದ್ : ಗುಜರಾತ್ ನ ಅಹಮದಾಬಾದ್ ನಲ್ಲಿ ಸಬರಮತಿ ನದಿಗೆ ಕಟ್ಟಲಾಗಿರುವ ‘ಅಟಲ್ ಸೇತುವೆ’ಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 2 ದಿನಗಳ ಕಾಲ ಗುಜರಾತ್ ಗೆ ಭೇಟಿ ನೀಡಿದ್ದು. ಇಂದು ಸಂಜೆ ಸಬರಮತಿ ನದಿಯ ಮುಂಭಾಗದಲ್ಲಿ ನಡೆಯಲಿರುವ ‘ಖಾದಿ ಉತ್ಸವ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ಸ್ಥಳದಿಂದ ಅಮ್ದಾವದ್ ಮುನ್ಸಿಪಲ್ ಕಾರ್ಪೊರೇಷನ್ ನಿರ್ಮಿಸಿರುವ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಾಣವಾಗಿರುವ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಈ ಸೇತುವೆಯನ್ನು ವಿಶೇಷವಾಗಿ ಗಾಳಿಪಟದ ಥೀಮ್ ನೊಂದಿಗೆ ನಿರ್ಮಿಸಲಾಗಿದೆ. ಸೇತುವೆಯ ಮಧ್ಯಭಾಗದಲ್ಲಿ ಕುಳಿತುಕೊಂಡು ನದಿಯ ಸೌದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.ಇನ್ನು ಈ ಸೇತುವೆಯೂ 300 ಮೀಟರ್ ಉದ್ದವಿದ್ದು 10-14 ಮೀಟರ್ ಅಗಲವಿದೆ. ವಿಶೇಷ ಸೈಕ್ಲಿಂಗ್ ಹಾದಿಯೂ ಈ ಸೇತುವೆಯಲ್ಲಿದೆ. 2,600 ಮೆಟ್ರಿಕ್ ಟನ್ ಉಕ್ಕಿನ ಕೊಳವೆಗಳನ್ನು ಬಳಸಿ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯ ಮೇಲ್ಛಾವಣಿಯು ವರ್ಣರಂಜಿತ ಬಟ್ಟೆಯಿಂದ ಮಾಡಲ್ಪಟ್ಟಿದೆ. ರೇಲಿಂಗ್ ಅನ್ನು ಗಾಜು ಮತ್ತು ಸ್ಟೇನ್ಲೆಸ್ ಸ್ಟೀಲ್ನಿಂದ ನಿರ್ಮಿಸಲಾಗಿದೆ.
ಈ ಸೇತುವೆಯನ್ನು ಜನರು ಕೆಳ ಮತ್ತು ಮೇಲಿನ ಕಾಲುದಾರಿಗಳಿಂದ ಅಥವಾ ನದಿಯ ಮುಂಭಾಗದ ವಾಯುವಿಹಾರದಿಂದ ಸಮೀಪಿಸಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.ಈ ಸೇತುವೆಯು ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಮತ್ತು ಪೂರ್ವ ಮತ್ತು ಪಶ್ಚಿಮ ದಂಡೆಯಲ್ಲಿ ವಿವಿಧ ಸಾರ್ವಜನಿಕ ಅಭಿವೃದ್ಧಿಗೆ ಸಂಪರ್ಕವನ್ನು ಒದಗಿಸುತ್ತದೆ.
PublicNext
27/08/2022 07:40 pm