ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ರಾಜೀನಾಮೆ ನೀಡಿರುವುದು ಸರಿಯಲ್ಲ ಇದು ದುಃಖದ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ, ಗಾಂಧಿ ಕುಟುಂಬದಿಂದ ಬೆಳದಿದ್ದ ಗುಲಾಂ ನಬಿ ಆಜಾದ್ ಅವರು ಉಪಕಾರ ಸ್ಮರಣೆ ಮಾಡದೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಹೆತ್ತ ತಾಯಿಗೆ ಮಾಡಿದ ದ್ರೋಹ ಎಂದು ಹೇಳಿದ್ದಾರೆ.
ಉಪಕಾರ ಸ್ಮರಣೆ ಇಲ್ಲದಿರುವುದಕ್ಕೆ ಇದು ಉದಾಹರಣೆಯಾಗಿದೆ. ದೇಶ ಕಷ್ಟದ ಕಾಲದಲ್ಲಿರುವಾಗ ಗುಲಾಂನಬಿ ಹೀಗೆ ಮಾಡಬಾರದಿತ್ತು ಎಂದು ಹೇಳಿದ್ದಾರೆ.
ಭಾರತ್ ಜೋಡೋ ಮೂಲಕ ದೇಶಕ್ಕಾಗಿ ಹೋರಾಟ ಮಾಡುವ ಬಗ್ಗೆ ಉದಯಪುರದಲ್ಲಿ ಚರ್ಚೆ ಮಾಡಲಾಯಿತು. 600 ಜನ ನಾಯಕರ ಉಪಸ್ಥಿತಿ ವೇಳೆ ಆಜಾದ್ ಕೂಡ ಇದ್ದರೂ. ಆಜಾದ್ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿರ್ಧಾರ ಕೈಗೊಳ್ಳುವ ತಂಡದಲ್ಲಿದ್ದರು. ಅವರಿಗೆ ಕಾಂಗ್ರೆಸ್ ಪಕ್ಷ 40 ವರ್ಷದ ಅಧಿಕಾರ ನೀಡಿತ್ತು. ಇದೆಲ್ಲವನ್ನು ಅವರು ಮರೆತಿದ್ದಾರೆ ಎಂದರು.
ಗುಲಾಂನಬಿ ಆಜಾದ್ ಎಂಬ ಹೆಸರು ಬರಲು ಮಾಜಿ ಪ್ರಧಾನಿ ನೆಹರೂ, ಗಾಂಧಿ ಕುಟುಂಬವೇ ಕಾರಣ. ಹೀಗಿದ್ದರೂ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.
PublicNext
27/08/2022 02:21 pm