ನವದೆಹಲಿ: ಮುಂದಿನ 3-4 ದಿನಗಳಲ್ಲಿ ಸಿಬಿಐ-ಇಡಿ ಅಧಿಕಾರಿಗಳು ನನ್ನನ್ನು ಬಂಧಿಸುವ ಸಾಧ್ಯತೆಗಳಿದೆ. ಆದರೆ ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ದೆಹಲಿಯ ಉಪೊ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ತಮ್ಮ ಮೇಲೆ ನಡೆದ ಸಿಬಿಐ ದಾಳಿಗೆ ಸಂಬಂಧಿಸಿದಂತೆ ನಿನ್ನೆ (ಶನಿವಾರ) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಷ್ಟ್ 19ರಂದು ನನ್ನ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಬಂದಿದ್ದರು. ಶಿಕ್ಷಣ ಇಲಾಖೆಯ ಕಚೇರಿ ಮೇಲೂ ದಾಳಿ ನಡೆಸಿದ್ದಾರೆ. ಎಲ್ಲಾ ಅಧಿಕಾರಿಗಳು, ಎರಡೂ ಸ್ಥಳಗಳಲ್ಲಿ ಅಧಿಕಾರಿಗಳು ತುಂಬಾ ಚೆನ್ನಾಗಿ ವರ್ತಿಸಿದರು. ಅವರು ಹೈಕಮಾಂಡ್‍ನ ಆದೇಶಗಳನ್ನು ಪಾಲಿಸಬೇಕಾಗಿತ್ತು. ಆದರೆ ತುಂಬಾ ಚೆನ್ನಾಗಿ ವರ್ತಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅಸಮಾಧಾನ ಹೊರ ಹಾಕಿದರು.
ಅಬಕಾರಿ ನೀತಿಯ ಕಾರಣದಿಂದಾಗಿ ಇಡೀ ವಿವಾದವನ್ನು ಸೃಷ್ಟಿಸಿಲಾಗಿದೆ. ಆದರೆ ಇದು ದೇಶದ ಅತ್ಯುತ್ತಮ ನೀತಿಯಾಗಿದೆ. ನಾವು ಅದನ್ನು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಅನ್ವಯಿಸುತ್ತಿದ್ದೇವೆ ಎಂದರು.
ಇನ್ನು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮನೀಶ್ ಸಿಸೋಡಿಯಾ, 'ಅವರ ಸಮಸ್ಯೆ ಮದ್ಯ ಅಥವಾ ಅಬಕಾರಿ ಹಗರಣವಲ್ಲ, ಅರವಿಂದ್ ಕೇಜ್ರಿವಾಲ್. ನನ್ನ ವಿರುದ್ಧದ ಸಂಪೂರ್ಣ ಪ್ರಕ್ರಿಯೆಗಳು ನನ್ನ ನಿವಾಸ ಮತ್ತು ಕಚೇರಿ ಮೇಲೆ ದಾಳಿಗಳು, ಅರವಿಂದ್ ಕೇಜ್ರಿವಾಲ್ ಅವರನ್ನು ತಡೆಯಲು ಮಾಡಿದ ಸಂಚು. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ನಾನು ಕೇವಲ ಅರವಿಂದ್ ಕೇಜ್ರಿವಾಲ್ ಅವರ ಶಿಕ್ಷಣ ಸಚಿವ ಅಷ್ಟೇ' ಎಂದು ಸ್ಪಷ್ಟನೆ ನೀಡಿದರು.
ಅಮೆರಿಕದ ಅತಿದೊಡ್ಡ ಪತ್ರಿಕೆ ದಿ ನ್ಯೂಯಾರ್ಕ್ ಟೈಮ್ಸ್ ತನ್ನ ಮೊದಲ ಪುಟದಲ್ಲಿ ದೆಹಲಿಯ ಶಿಕ್ಷಣ ಮಾದರಿಯನ್ನು ಪ್ರಕಟಿಸಿದೆ. ಇದು ಭಾರತಕ್ಕೆ ಒಂದು ಹೆಮ್ಮೆ, ಸುಮಾರು 1.5 ವರ್ಷಗಳ ಹಿಂದೆ, ಗಂಗಾ ನದಿಯ ಉದ್ದಕ್ಕೂ ಸಾವಿರಾರು ದೇಹಗಳನ್ನು ಸುಡುತ್ತಿರುವುದನ್ನು ತೋರಿಸುವ ಮತ್ತೊಂದು ಕಥೆಯನ್ನು ಅವರು ಪ್ರಕಟಿಸಿದರು, ಇದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಸರ್ಕಾರ ವಿರುದ್ಧ ಗುಡುಗಿದರು.
ಮುಂಬರುವ 2024ರ ಲೋಕಸಭೆ ಚುನಾವಣೆ ಬಿಜೆಪಿ V/S ಆಪ್ ನಡುವೆ ಇರಲಿದೆ. ಬಿಜೆಪಿ ಆಪ್ ಕಾರ್ಯಗಳಿಂದ ಹೆದರಿದ್ದಾರೆ. ಹೀಗಾಗಿ ನಮ್ಮನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ, ಬಗ್ಗುವುದಿಲ್ಲ ಎಂದು ತಿರುಗೇಟು ನೀಡಿದರು.
PublicNext
21/08/2022 09:47 am