ಕೋಲಾರ: ರೈತರ ಸಮಸ್ಯೆ ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬರಿಗೆ ‘ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ. ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೆ. ಚುನಾವಣೆ ಬರೋವರೆಗೂ ತಳ್ತಾ ಇದ್ದೀವಿ’ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಪ್ರಕರಣ ಸಂಬಂಧ ಸ್ವಪಕ್ಷದಲ್ಲೇ ಆಕ್ರೋಶ ವ್ಯಕ್ತವಾಗಿದೆ.
ಸಚಿವ ಅಶ್ವತ್ಥ ನಾರಾಯಣ್ ಅವರು ಈ ಆಡಿಯೋ ಮಾಧುಸ್ವಾಮಿಯದ್ದಲ್ಲ, ಪ್ರತಿಪಕ್ಷಗಳ ಕುತಂತ್ರ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಮಾಧುಸ್ವಾಮಿ ವಿರುದ್ಧ ಕಿಡಿಕಾರಿರುವ ಸಚಿವ ಮುನಿರತ್ನ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುನಿರತ್ನ, ಸರ್ಕಾರ ನಡೆಯುತ್ತಿಲ್ಲ ಮ್ಯಾನೇಜ್ ಮಾಡ್ತಿದ್ದೇವೆ ಎಂಬ ಹೇಳಿಕೆ ಅವರ ಹಿರಿತನಕ್ಕೆ ಶೋಭೆ ತರೋದಿಲ್ಲ. ಕೂಡಲೇ ಮಾಧುಸ್ವಾಮಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಸರ್ಕಾರದಲ್ಲಿ ಮಾಧುಸ್ವಾಮಿ ಸಹ ಒಂದು ಭಾಗ. ಸಂಪುಟದ ಪ್ರತಿಯೊಂದು ಅಂಶದಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಅಂತಹ ಹೇಳಿಕೆ ನೀಡಿದ್ರೆ ಅವರು ಕೂಡ ಪಾಲುದಾರರಾಗಿರುತ್ತಾರೆ. ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿದ್ದು, ಈ ರೀತಿ ಮಾತನಾಡಬಾರದು ಎಂದು ಎಚ್ಚರಿಸಿದ್ದಾರೆ.
ಆದ್ರೆ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಸಚಿವ ಅಶ್ವಥ ನಾರಾಯಣ್ ಕೂಡ ಮಾಧುಸ್ವಾಮಿ ಅವರು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಮಾಧುಸ್ವಾಮಿ ಅವರನ್ನೇ ಕೇಳಬೇಕು. ನಮ್ಮ ಸರ್ಕಾರ ಅತ್ಯದ್ಭುತವಾಗಿ ಕೆಲಸ ಮಾಡುತ್ತಿದೆ. ಆಡಿಯೋ ಮೂಲಕ ಅಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.
PublicNext
15/08/2022 09:18 pm