ನವದೆಹಲಿ: 15ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮುರ್ಮು ‘ರಾಷ್ಟ್ರಪತ್ನಿ’ ಎಂದು ಎಂದು ಹೇಳಿ ಅವಮಾನಿಸಿದ್ದಾರೆ.ಈ ಹೇಳಿಕೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ ಈ ಹೇಳಿಕೆ ನೀಡಿರುವುದಕ್ಕೆ ಸೋನಿಯಾ ಗಾಂಧಿ ದೇಶದ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.
ಲೋಕಸಭೆಯಲ್ಲಿ ಸೋನಿಯಾ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ ಸ್ಮೃತಿ ಇರಾನಿ, ದೇಶದ ಅತ್ಯುನ್ನತ ಸಾಂವಿಧಾನಿಕ ಕಚೇರಿಯಲ್ಲಿ ಮಹಿಳೆಯೊಬ್ಬರನ್ನು ಅವಮಾನಿಸಲು ಸೋನಿಯಾ ಗಾಂಧಿ ಅನುಮೋದಿಸಿದ್ದಾರೆ. ಸೋನಿಯಾ ಅವರು ಆದಿವಾಸಿ ವಿರೋಧಿ ಹಾಗೂ ದಲಿತ ವಿರೋಧಿ. ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಇರಾನಿ ಒತ್ತಾಯಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಪಕ್ಷದ ಸಂಸದರ ಜೊತೆಗೂಡಿ ಸಂಸತ್ತಿನ ಆವರಣದ ಒಳಗೆ ಅಧಿರ್ ರಂಜನ್ ಹೇಳಿಕೆ ವಿರೋಧಿಸಿ ಪ್ರತಿಭಟಿಸಿದರು. ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೋರಿರುವ ಅಧೀರ್ ರಂಜನ್, ಇದು ಬಾಯ್ತಪ್ಪಿನಿಂದ ಆದ ಎಡವಟ್ಟಷ್ಟೇ, ನಾನು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ ಎಂದು ಹೇಳಿದರು.
ಈ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನಿಯಾ ಗಾಂಧಿ, ಈಗಾಗಲೇ ಅಧೀರ್ ರಂಜನ್ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್, ಸೋನಿಯಾ ಗಾಂಧಿ ಇಡಿ ವಿಚಾರಣೆ ವೇಳೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಹೇಳಿಕೆಯನ್ನು ನೀಡಿದರು.
PublicNext
28/07/2022 04:33 pm