ತುಮಕೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ರಾಜ್ಯದಲ್ಲಿ ಸಂಚಲವನ್ನು ಸೃಷ್ಟಿಸಿದೆ. ಸದ್ಯ ಈ ಘಟನೆಯಿಂದ ತೀವ್ರ ಬೇಸರಗೊಂಡ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.ಸದ್ಯ ತುಮಕೂರು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕಿ ಶಕುಂತಲಾ ನಟರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷದ ಹಾಗೂ ನಾಯಕರ ನಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಬಿಜೆಪಿ ಇದೊಂದು ಕೇವಲ ರಾಜಕೀಯ ಪಕ್ಷವಲ್ಲ, ಈ ಪಕ್ಷಕ್ಕೆ ತನ್ನದೇ ಆದಂತಹ ಇತಿಹಾಸ ವಿಚಾರ ಸಿದ್ಧಾಂತಕ್ಕಾಗಿ ಅನೇಕ ಕಾರ್ಯಕರ್ತರ ಬಲಿದಾನ ನಡೆದಿರುವಂತದ್ದು ಇತಿಹಾಸವಾದರೆ ಇಂದಿನ ಕಾಲಘಟ್ಟದಲ್ಲೂ ಕೂಡ ಸೈದ್ಧಾಂತಿಕ ವಿಚಾರಧಾರೆಗೆ ಹೋರಾಡುವಂತಹ ದುರ್ಗತಿ ಬಂದು ಒದಗಿರುವುದು ಕಾರ್ಯಕರ್ತರಿಗೆ ನೋವಾಗುತ್ತಿದೆ.
ಪ್ರವೀಣ್ ನೆಟ್ಟಾರೆ ಸಾವು ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು ಅಮಾನುಷವಾಗಿ ಬರ್ಬರವಾಗಿ ರಾತ್ರಿ ಸಮಯದಲ್ಲಿ ಹಿಂದಿನಿಂದ ಬಂದು ಹೊಡೆದಿರುವುದು ಹೇಡಿಗಳ ಕೃತ್ಯವಾಗಿದೆ. ಬಿಜೆಪಿಯ ಯುವ ಮೋರ್ಚಾ ಸಕ್ರಿಯ ಕಾರ್ಯಕರ್ತರಾಗಿ ತೊಡಗಿಸಿಕೊಂಡಿದ್ದ ಯುವ ನಾಯಕ ಇಂದು ಸಮಾಜಕ್ಕಾಗಿ ಪ್ರಾಣ ತೆತ್ತಿರುವುದು ದುರ್ದೈವದ ಸಂಗತಿ.
ಹಿಂದೆಲ್ಲಾ ನಡೆದಂತಹ ಕೊಲೆಗಳಿಗೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದೆ. ಕಠಿಣ ಕ್ರಮ ಎನ್ನುವ ಭರವಸೆ ಭರವಸೆಯಾಗೆ ಉಳಿದಿರುವ ಕಾರಣ ಬಿಜೆಪಿ ತುಮಕೂರು ಜಿಲ್ಲೆಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂಬುದಾಗಿ ಅವರು ರಾಜೀನಾಮೆ ಕಾರಣವನ್ನು ವಿವರವಾಗಿ ಹೇಳಿಕೊಂಡಿದ್ದಾರೆ.
PublicNext
27/07/2022 06:05 pm