ಬೆಂಗಳೂರು: ಎಡಿಜಿಪಿ ಅಮೃತ್ ಪೌಲ್ ಬಂಧನದ ಮೂಲಕ ಪಿಎಸ್‌ಐ ಪರೀಕ್ಷಾ ನೇಮಕಾತಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇದಾದ ನಂತರ ಪ್ರತಿಪಕ್ಷಗಳು ಸರ್ಕಾರದ ಮೇಲೆ ಟೀಕಾ ಪ್ರಹಾರ ನಡೆಸುತ್ತಿವೆ. ಈ ಹಗರಣದಲ್ಲಿ ಉನ್ನತ ಅಧಿಕಾರಿಗಳೇ ಶಾಮೀಲಾಗಿರುವುದು ಸರ್ಕಾರದ ಆಡಳಿತ ವೈಫಲ್ಯತೆಗೆ ಸಾಕ್ಷಿ ಎಂದ ರಾಜ್ಯ ಕಾಂಗ್ರೆಸ್ ಹೇಳಿದೆ.
ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡುರುವ ರಾಜ್ಯ ಬಿಜೆಪಿ, ಬೊಮ್ಮಾಯಿ ಸರ್ಕಾರ ಭ್ರಷ್ಟರ ಪಾಲಿನ ದುಃಸ್ವಪ್ನವಾಗಿದೆ. ಜನರ ನಿರೀಕ್ಷೆಗನ್ನು ಹುಸಿಗೊಳಿಸಲು ಬಿಡೋದಿಲ್ಲ ಎಂದು ಸಮರ್ಥನೆ ನೀಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, 'ಪಿಎಸ್ಐ ನೇಮಕಾತಿ ಹಗರಣ ಎಂಬುದು ಕಾರ್ಕೋಟಕ ವೃಕ್ಷ. ಇದು ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಹೊರಬಂದಿರಬಹುದು, ಆದರೆ, ಕಾಣದ ‘ಕೈ’ಗಳು ಭ್ರಷ್ಚಾಚಾರದ ಬೀಜ ಬಿತ್ತಿ, ಹೆಮ್ಮರವಾಗುವ ತನಕ ನೀರೆರೆದಿದ್ದು ಆಗಲೇ ಹೊರತು ಈಗಲ್ಲ. ಬಿಜೆಪಿ ಸರ್ಕಾರ ಪಿಎಸ್ಐ ಹಗರಣದ ಬೇರುಗಳನ್ನು ಮೂಲೋತ್ಪಾಟನೆ ಮಾಡಿ ಸ್ವಸ್ಥ ಸಮಾಜವನ್ನು ನಿರ್ಮಿಸಲಿದೆ' ಎಂದು ಹೇಳಿದೆ.
'ಭ್ರಷ್ಟಾಚಾರವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ. ಪಿಎಸ್ಐ ನೇಮಕಾತಿ ಹಗರಣದ ಹಿಂದೆ ಎಷ್ಟೇ ಪ್ರಬಲ ಶಕ್ತಿಗಳ ಕೈವಾಡವಿದ್ದರೂ ಅವುಗಳ ಹುಟ್ಟಡಗಿಸದೇ ಬಿಡುವುದಿಲ್ಲ. ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದು ಬಿಜೆಪಿಯ ಪರಮಧ್ಯೇಯ. ಎಡಿಜಿಪಿ ಅಮೃತ್ ಪೌಲ್ & ಬೆಂಗಳೂರು ನಗರ ಡಿ.ಸಿ ಮಂಜುನಾಥ್ ಬಂಧನಗಳೇ ಬಿಜೆಪಿಯ ಈ ಪ್ರತಿಜ್ಞೆಗೆ ಸಾಕ್ಷಿ.' 'ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗಳೇ ಬಿಜೆಪಿಯ ಆಧಾರಸ್ತಂಭಗಳು. ಹೀಗಾಗಿಯೇ, ದೇಶದ ಜನರು ಬಿಜೆಪಿಯ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಭ್ರಷ್ಟರ ಪಾಲಿಗೆ ಬೊಮ್ಮಾಯಿ ಸರ್ಕಾರ ದುಃಸ್ವಪ್ನವಾಗಿದ್ದು, ಜನರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ಜನರ ಆಶೋತ್ತರಗಳಿಗೆ ಕೊಳ್ಳಿ ಇಡುವವರನ್ನು ನಮ್ಮ ಸರ್ಕಾರ ಬಗ್ಗುಬಡಿಯುತ್ತದೆ' ಎಂದು ರಾಜ್ಯ ಬಿಜೆಪಿ ಬೊಮ್ಮಾಯಿ ಸರಕಾರದ ಪರ ಟ್ವೀಟ್ ಮಾಡಿದೆ.
PublicNext
05/07/2022 04:20 pm