ಬೆಂಗಳೂರು: ಬಿಜೆಪಿ ಪರಿಶಿಷ್ಟ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮೂಲಕ ವಾಕ್‌ಪ್ರಹಾರ ನಡೆಸಿರುವ ರಾಜ್ಯ ಬಿಜೆಪಿ, ಹಲವಾರು ದಲಿತ ನಾಯಕರನ್ನು ಮೋಸದಿಂದ ಸೋಲಿಸಿದ್ದೇ ಸಿದ್ದರಾಮಯ್ಯ ಎಂದು ಕಿಡಿಕಾರಿದೆ.
ಸಿದ್ದರಾಮಯ್ಯರಿಗೆ ಆತ್ಮಸಾಕ್ಷಿ ಇಲ್ಲ ಎಂದು ವಾಗ್ದಾಳಿ ನಡೆಸಿರುವ ಬಿಜೆಪಿ ಹಲವು ತಾರ್ಕಿಕ ಹಾಗೂ ಮಾರ್ಮಿಕ ಪ್ರಶ್ನೆಗಳನ್ನು ಎತ್ತಿದೆ. ಕೆಪಿಸಿಸಿಯ ಅಂದಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರನ್ನು ಸೋದರನಂತೆ ನೋಡಿಕೊಂಡರು. ಆದರೆ ಸಿದ್ದರಾಮಯ್ಯ ಅವರು ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದರು. ದಲಿತ ನಾಯಕನ ಬೆನ್ನಿಗೆ ಚೂರಿ ಹಾಕಿದ್ದು ಆತ್ಮಸಾಕ್ಷಿಯೇ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಇದೇ ರೀತಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ನಡೆದ ಹಗರಣಗಳು ಹಾಗೂ ವೈಫಲ್ಯಗಳನ್ನು ಬಿಜೆಪಿ ಪ್ರಶ್ನೆ ಮಾಡಿದೆ. 'ನಾನು ರೈತ ಪರ. ನಾನು ನಂಜುಂಡಸ್ವಾಮಿ ಅವರ ಶಿಷ್ಯ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರೈತರು ಕುಡಿದು ಸತ್ತರು ಎಂದು ಹೇಳಿಕೆ ನೀಡಿ ರೈತರಿಗೆ ಅವಮಾನ ಮಾಡಿದ್ದರು. ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ?..2013 ರಿಂದ 2017 ರ ಅವಧಿಯಲ್ಲಿ ಕರ್ನಾಟಕದಲ್ಲಿ 3 ಸಾವಿರಕ್ಕೂ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿತ್ತು. ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಎಲ್ಲಿತ್ತು? ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಆದಾಗ, ಅಂದಿನ ಗೃಹ ಸಚಿವ ಜಾರ್ಜ್ ಹಿಂದೆ ನಿಂತಾಗ ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಎಲ್ಲಿತ್ತು? ಸಿದ್ದರಾಮಯ್ಯ ಅವರು ತಾನು ಸಾಮಾಜಿಕ ನ್ಯಾಯದ ಪರ ಎಂದು ಘೋಷಿಸಿಕೊಂಡು ವಿದ್ಯಾರ್ಥಿಗಳ ಪ್ರವಾಸ ಯೋಜನೆಯಲ್ಲೂ ಜಾತಿ ಹುಡುಕಿದರು. ಶಾದಿಭಾಗ್ಯ ಯೋಜನೆ ತಂದು ಹೆಣ್ಣು ಮಕ್ಕಳಲ್ಲೂ ಧರ್ಮ ಹುಡುಕಿದರು. ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ? ಎಂದು ಸರಣಿ ಪ್ರಶ್ನೆ ಕೇಳುವ ಮೂಲಕ ರಾಜ್ಯ ಬಿಜೆಪಿ ಸಿದ್ದರಾಮಯ್ಯ ಮೇಲೆ ಕೆಂಡ ಕಾರಿದೆ.
'ಬೆಂಗಳೂರು ನಗರದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಡ್ರಗ್ಸ್ ಹಾವಳಿ ಮಿತಿ ಮೀರಿತ್ತು. ಯುವಜನತೆಗೆ ದುಃಸ್ವಪ್ನವಾಗಿದ್ದ ದಂಧೆಯ ನಿಯಂತ್ರಣಕ್ಕೆ ಶ್ರಮಿಸದೇ ಸುಮ್ಮನಿದ್ದಿದ್ದು ಆತ್ಮಸಾಕ್ಷಿಯೇ?ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಎಸ್‌ಡಿಪಿಐ, ಪಿಎಫ್ಐನಂತಹ ಮತಾಂಧ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡರು. ಈಗ ಬಿಜೆಪಿ ಸರ್ಕಾರ ಇವುಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸುವಾಗ ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಎಲ್ಲಿತ್ತು? ಎಂದು ಮಾರ್ಮಿಕ ಪ್ರಶ್ನೆ ಮುಂದಿಡುವ ಮೂಲಕ ಸಿದ್ದರಾಮಯ್ಯ ಮೇಲೆ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
PublicNext
10/06/2022 06:23 pm