ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ನಿರಂತರ ವಾಕ್ ಪ್ರಹಾರ ನಡೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಗುರುವಾರ ಮತ್ತೆ ಸರಣಿ ಟ್ವೀಟ್ ಮೂಲಕ ಕೆಲವು ತಾರ್ಕಿಕ ಪ್ರಶ್ನೆಗಳನ್ನು ಕೇಳಿದ್ದಾರೆ. ನಾನು ಕಳೆದ ಸಲ ಕೇಳಿದ ಪ್ರಶ್ನೆಗಳಿಗೆ ಇನ್ನೂ ಯಾಕೆ ಉತ್ತರ ಸಿಕ್ಕಿಲ್ಲ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, 'ಆರ್ಯನ್ ಆರ್‌ಎಸ್‌ಎಸ್' ಎಂದು ಹ್ಯಾಷ್ ಟ್ಯಾಗ್ ಮಾಡುವ ಮೂಲಕ ಆರ್‌ಎಸ್‌ಎಸ್ ನಾಯಕರನ್ನು ಕೆಣಕಿದ್ದಾರೆ .
'ಆರ್ಎಸ್ಎಸ್ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಯಾಕೆ ಅಲ್ಲಿ ಹಿಂದುಗಳೇ ಆಗಿರುವ ದಲಿತ ಮತ್ತು ಹಿಂದುಳಿದ ಜಾತಿಗಳಿಲ್ಲ? ಎನ್ನುವ ನನ್ನ ಸರಳ ಪ್ರಶ್ನೆಗೆ ಯಾಕೆ, ಯಾರೂ ಉತ್ತರಿಸುತ್ತಿಲ್ಲ?' ಎಂದು ಕೇಳಿರುವ ಸಿದ್ದರಾಮಯ್ಯ, 'ಯಾವುದೇ ವ್ಯಕ್ತಿ-ಸಿದ್ದಾಂತ- ಸಂಸ್ಥೆ ಇತರರಲ್ಲಿ ಗೌರವ ಹುಟ್ಟಿಸಬೇಕೇ ಹೊರತು ಭಯ ಹುಟ್ಟಿಸುವುದಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಬೇಕಾದವರು ಭಯವನ್ನು ಉತ್ಪಾದಿಸುವವರೇ ಹೊರತು ಭಯ ಪಡುವವರಲ್ಲ' ಎಂದಿದ್ದಾರೆ.
ತಮ್ಮ ಮಕ್ಕಳಿಗೆ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ, ಹಿಂದುಳಿದ ಸಮುದಾಯದ ಬಡವರ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ ಆರ್‌ಎಸ್‌ಎಸ್ ಬಗ್ಗೆ ಭಯ ಸಹಜ ಅಲ್ಲವೇ ಡಿ.ವಿ ಸದಾನಂದಗೌಡ ಅವರೇ? ಮೀಸಲಾತಿ, ಭೂಸುಧಾರಣೆಯಂತಹ ಬಹುಸಂಖ್ಯೆಯ ಹಿಂದೂಗಳೇ ಫಲಾನುಭವಿಗಳಾಗಿರುವ ಸಾಮಾಜಿಕ ನ್ಯಾಯದ ಕಾನೂನುಗಳನ್ನೇ ವಿರೋಧಿಸುವ ಆರ್‌ಎಸ್‌ಎಸ್ ಬಗ್ಗೆ ಭಯವಲ್ಲದೆ ಪ್ರೀತಿ ಇರಲು ಸಾಧ್ಯವೇ? ಎಂದು ಖಾರವಾಗಿ ಪ್ರಶ್ನೆ ಮುಂದಿಟ್ಟಿದ್ದಾರೆ.
'ಉನ್ನತ ಪದಾಧಿಕಾರದಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳಾದ ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದೂರ ಇಟ್ಟಿರುವ ಕಾರಣಕ್ಕಾಗಿಯೇ ಈ ಸಮುದಾಯಗಳಂತೆ ನನಗೂ ಆರ್‌ಎಸ್‌ಎಸ್ ಬಗ್ಗೆ ಭಯ ಇದೆ. ಆರ್.ಎಸ್.ಎಸ್ ಬಗೆಗಿನ ಭಯದ ಕಾರಣದಿಂದಾಗಿಯೇ ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಮೇಲೆ ದೇಶದ ಮೊದಲ ಗೃಹಸಚಿವ ವಲ್ಲಭಭಾಯಿ ಪಟೇಲ್ ಅವರು ನಿಷೇಧ ಹೇರಿದ್ದು ಎನ್ನುವುದು ನೆನಪಿರಲಿ. ಭಯ ಹುಟ್ಟಿಸುವವರನ್ನು ಸಾಮಾನ್ಯ ಭಾಷೆಯಲ್ಲಿ ಭಯೋತ್ಪಾದಕರು ಎನ್ನಲಾಗುತ್ತಿದೆ. ಡಿ.ವಿ ಸದಾನಂದಗೌಡ ಅವರು ಯಾಕೆ ತನ್ನ ಮಾತೃ ಸಂಸ್ಥೆಯ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಅವರು, ಆರ್‌ಎಸ್‌ಎಸ್ ಕಂಡರೆ ನನಗೆ ಭಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ನನಗೆ ಮಾತ್ರವಲ್ಲ ಜಾತ್ಯತೀತತೆ, ಸೌಹಾರ್ದತೆ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆರ್‌ಎಸ್ಎಸ್ ಕಂಡರೆ ಭಯ ಇದೆ.
PublicNext
02/06/2022 12:36 pm