ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ ಆಗಿದ್ದ ಬಿ.ವೈ ವಿಜಯೇಂದ್ರಗೆ ಕೊನೆ ಕ್ಷಣದಲ್ಲಿ ನಿರಾಸೆಯಾಗಿದೆ. ರಾಜ್ಯ ಕೋರ್ ಕಮಿಟಿಯು ವಿಜಯೇಂದ್ರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿತ್ತು. ಈ ಬಗ್ಗೆ ಸಾಧಕ-ಬಾಧಕಗಳ ಚರ್ಚೆಯೂ ಆಗಿತ್ತು. ಆದ್ರೆ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರಾಕರಿಸಿದೆ.
ಇದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಜಯೇಂದ್ರ ಹಿಂಬಾಲಕರು ಮತ್ತು ಕಾರ್ಯಕರ್ತರಿಂದ ಹಲವು ವಿಶ್ಲೇಷಣೆ ಹಾಗೂ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಇದೆಲ್ಲ ಚರ್ಚೆಗಳಿಗೆ ತೆರೆ ಎಳೆಯಲು ವಿಜಯೇಂದ್ರ ಟ್ವೀಟ್ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಟ್ವೀಟ್ ಮೂಲಕ ಪತ್ರ ಬರೆದಿರುವ ವಿಜಯೇಂದ್ರ ಈ ಸಂದರ್ಭವನ್ನು ಕಾರ್ಯಕರ್ತರು ಮತ್ತು ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ವಿಜಯೇಂದ್ರ ಮಾಡಿರುವ ಟ್ವೀಟ್ ಸಾರಾಂಶ ಹೀಗಿದೆ:
ಸಂಘದ ಶಿಸ್ತು, ಪಕ್ಷದ ಸಂಘಟನೆ, ಜನಪರ ಹೋರಾಟ ಹಾಗೂ ಸೇವೆಯನ್ನು ನಿಜ ಕಾಯಕವೆಂದು ತಿಳಿದು ಬದುಕಿನ ಹೆಜ್ಜೆಯಿಟ್ಟವರು ಪೂಜ್ಯ ತಂದೆ ಯಡಿಯೂರಪ್ಪನವರು ಈ ಕಾರಣಕ್ಕಾಗಿಯೇ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣವಚನ ಸ್ವೀಕರಿಸುವ ಅವಕಾಶ ಕಲ್ಪಿಸಿದ್ದು ಜನರ ಆಶೀರ್ವಾದ ಹಾಗೂ ಬಿಜೆಪಿ. ಅಂತೆಯೇ ಅನಿರೀಕ್ಷಿತ ತಿರುವಿನಲ್ಲಿ ರಾಜಕೀಯ ಪ್ರವೇಶಿಸಿದ ನನಗೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷನಾಗಿ ಮಹತ್ವದ ಜವಾಬ್ದಾರಿ ನೀಡಿ ನನ್ನ ಬೆನ್ನುತಟ್ಟಿ ಬೆಳೆಸುತ್ತಿರುವುದು ಪಕ್ಷ ಮತ್ತು ಪಕ್ಷದ ವರಿಷ್ಠರು.
ರಾಜಕೀಯ ಅಧಿಕಾರಗಳು ನಿಂತ ನೀರಲ್ಲ, ಅದು ಹರಿಯುವ ನದಿಯ ಹಾಗೆ. ಇದನ್ನು ಕಾರ್ಯಕರ್ತರು, ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಅನಗತ್ಯ ಟೀಕೆ, ಟಿಪ್ಪಣಿಗಳು, ಉದ್ಘೋಷಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೆ ಅದರಿಂದ ನನ್ನ ವ್ಯಕ್ತಿತ್ವಕ್ಕೆ ಹಾಗೂ ಪೂಜ್ಯ ತಂದೆಯವರ ಭಾವನೆಗಳಿಗೆ ಮಸಿ ಬಳಿದಂತಾಗುವುದೇ ವಿನಾ ನಮ್ಮನ್ನು ಬೆಂಬಲಿಸಿದಂತೆ ಆಗುವುದಿಲ್ಲ ಎನ್ನುವುದನ್ನು ಹಿತೈಷಿ ಎಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ ಅರಿಯಬೇಕು. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರು. ಸಾಮರ್ಥ್ಯ ಇರುವವರನ್ನು ಪಕ್ಷ ಎಂದಿಗೂ ಕೈಬಿಟ್ಟಿಲ್ಲ, ಬಿಡುವುದೂ ಇಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಸಹನೆ, ಸೌಜನ್ಯದಿಂದ ವರ್ತಿಸಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
PublicNext
24/05/2022 07:04 pm