ದೊಡ್ಡಾಲದ ಹಳ್ಳಿ ( ಕನಕಪುರ) : ಹಗರಣಗಳನ್ನು ಸರ್ಕಾರದ ಪ್ರಭಾವದಿಂದಷ್ಟೇ ಮುಚ್ಚಿಹಾಕಲು ಸಾಧ್ಯ. ಪಿಎಸ್ ಐ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆಯ ನಾಲ್ಕೈದು ಜನ ಆಯ್ಕೆಯಾಗಿದ್ದು, ಮೊದಲ ಸ್ಥಾನವನ್ನು ಪಡೆದಿದ್ದಾರೆ. ಇವರು ನಮಗೆ ಬೇಕಾದ ಹುಡುಗರೇ ಆಗಿದ್ದು, ಈ ಹಗರಣದಲ್ಲಿ ಭಾಗಿಯಾಗಿ ಬಂಧನವಾಗಿದ್ದಾರೆ. ಅವರಿಗೆ ಈ ಅಕ್ರಮದಲ್ಲಿ ಮಂತ್ರಿಗಳು ಸಹಾಯ ಮಾಡಿದ್ದಾರೋ, ಅವರ ಕುಟುಂಬದವರು ಮಾಡಿದ್ದಾರೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ.
ದೊಡ್ಡಾಲದಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಆ ಊರಿನ ಅಕ್ಕಪಕ್ಕದ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ಸರ್ಕಾರ ಈ ಅಕ್ರಮ ನೇಮಕಾತಿಗೆ ಅಂಗಡಿ ತೆರೆದ ಕಾರಣಕ್ಕೆ ಇವರುಗಳು ಅಲ್ಲಿಗೆ ಹೋಗಿದ್ದಾರೆ. ಅವರು ಅಂಗಡಿ ತೆರೆಯದಿದ್ದರೆ ಯಾರಾದರೂ ಇದರಲ್ಲಿ ಭಾಗಿಯಾಗುತ್ತಿದ್ದರಾ? ಪ್ರಭಾವಿಗಳು ಇಂತಹ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಮನೆ ಮಠ, ಆಸ್ತಿ ಪಾಸ್ತಿ ಮಾರಿಕೊಂಡು, ಸಾಲ ಮಾಡಿ, ಅಕ್ರಮ ಪ್ರಯತ್ನ ಮಾಡಿ ಸಿಕ್ಕಿಬಿದ್ದಿದ್ದಾರೆ.
ಲಂಚ ಕೊಟ್ಟವರಾರೂ ಲಂಚ ಕೊಟ್ಟಿದ್ದೇನೆ ಎಂದು ಹೇಳುವುದಿಲ್ಲ. ಅದನ್ನು ಪಡೆದವನು ಕೂಡ ಲಂಚ ಪಡೆದಿರುವುದಾಗಿ ಹೇಳುವುದಿಲ್ಲ. ಆದರೆ ವಿಚಾರಣೆಗೆ ನೋಟಿಸ್ ಕೊಟ್ಟು, ಮಂತ್ರಿ ಸಂಬಂಧಿ ಪ್ರಭಾವ ಬೀರಿದರು ಎಂದು ವಿಚಾರಣೆ ಮಾಡದೇ ವಾಪಸ್ ಕಳುಹಿಸಲಾಗಿದೆ.
ಪೊಲೀಸರು ಯಾರನ್ನು, ಯಾವ ರೀತಿ ವಿಚಾರಣೆ ಮಾಡಿದ್ದಾರೆ? ಮೊದಲನೇ ಸ್ಥಾನ ಪಡೆದವರನ್ನು ವಶದಲ್ಲಿಟ್ಟುಕೊಂಡು, ನಾಲ್ಕನೇ ಸ್ಥಾನ ಪಡೆದವರನ್ನು ಬಿಟ್ಟು ಕಳುಹಿಸಿರುವುದೇಕೆ?’ ಎಂದು ಪ್ರಶ್ನೆ ಮಾಡಿದ್ದಾರೆ.
- ಪ್ರವೀಣ್ ರಾವ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
04/05/2022 05:11 pm