" ರೋಮ್ ಉರಿಯುವಾಗ ನಿರೋ ಪಿಟೀಲು ಬಾರಿಸ್ತಾ ಇದ್ದನಂತೆ ''
ಈ ಗಾದೆ ಇಲ್ಲಿ ಅಪ್ರಸ್ತುತವೆನಿಸಿದರೂ ನಮ್ಮನ್ನಾಳುವವರು ಸಂವೇದನಾ ರಹಿತರಾಗಿ ವರ್ತಿಸಿದಾಗ ಉದಾಹರಿಸುವುದು ಅನಿವಾರ್ಯ. ಉದಾಹರಿಸಿ ಎಚ್ಚರಿಸಲೇ ಬೇಕು.
ಟಾಪ್ ಸೇರಿ 150 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸೊಂದು ಅತಿವೇಗ ಹಾಗೂ ಚಾಲಕನ ನಿರ್ಲಕ್ಷದಿಂದ ಅನಾಮತ್ತಾಗಿ ಉರುಳಿಬಿದ್ದಿದೆ.
ಈ ದುರ್ಘಟನೆಯಲ್ಲಿ ಆರು ಜನ ಪ್ರಾಣ ಕಳೆದುಕೊಂಡು 50 ಜನ ಗಾಯಗೊಂಡು ಆಸ್ಪತ್ರೆಗಳಲ್ಲಿ ವಿಲಿ ವಿಲಿ ಒದ್ದಾಡುತ್ತಿದ್ದರೆ, ನಮ್ಮ ಸಿ.ಎಂ ಬಸವರಾಜ್ ಬೊಮ್ಮಾಯಿ ಸಾಹೇಬ್ರು ಚಿಕ್ಕಬಳ್ಳಾಪುರದಲ್ಲಿ ತಮ್ಮ ಸಹೋದ್ಯೋಗಿ ಸಚಿವರೊಂದಿಗೆ ರಾಜಮೌಳಿ ಅವರ RRR ತೆಲಗು ಸಿನೆಮಾ ನೋಡುತ್ತ ಮೂರ್ನಾಲ್ಕು ತಾಸು ಕಾಲ ಕಳೆದಿದ್ದಾರೆ.
ಸಿ.ಎಂ ಆದವರಿಗೂ ಖಾಸಗಿ ಜೀವನವಿರುತ್ತೆ, ಅವರಿಗೂ ಮನರಂಜನೆ ಬೇಕೆ ಬೇಕು. ಹೌದು ಆದ್ರೆ, ಇಂತಹ ದೊಡ್ಡ ದುರಂತ ಸಂಭವಿಸಿದಾಗಲೂ ಸಾರ್ವಜನಿಕ ಹಿತಾಸಕ್ತಿಯೇ ಇಲ್ಲದ ಸಿನೆಮಾ ಪ್ರೊಮೋಷನ್ ಮಾಡುತ್ತ ಕುಳಿತ್ರೆ ರಾಜ್ಯದ ಜನತೆ ಒಪ್ಪಲು ಸಾಧ್ಯವೇ?
ಮಾಜಿ ಸಿ.ಎಂ ಕುಮಾರಸ್ವಾಮಿ ಅವರು ಬೊಮ್ಮಾಯಿ ಅವರ ಈ ವರ್ತನೆ ಟೀಕಿಸಿ, ಬಸ್ ದುರ್ಘಟನೆಗಿಂತ RRR ಸಿನೆಮಾ ಪ್ರಮೋಷನ್ ಮುಖ್ಯವಾಗಿತ್ತೆ? ತಕ್ಷಣ ಗಾಯಾಳುಗಳನ್ನು ನೋಡುವ ಬದಲು ನಾಲ್ಕು ತಾಸು ಸಿನೆಮಾ ನೋಡುತ್ತ ಕಾಲಹರಣ ಮಾಡಿದ್ದು ಸರಿಯೇ? ಎಂದಿದ್ದಾರೆ.
ರಾಜಕಾರಣ ಬದಿಗಿಟ್ಟು ನೋಡಿದರೆ ಕುಮಾರಸ್ವಾಮಿ ಟೀಕೆಯಲ್ಲಿ ಅರ್ಥವಿದೆ. ಮುಖ್ಯಮಂತ್ರಿ ಇರಲಿ ಯಾರೆ ಇರಲಿ ಜವಾಬ್ದಾರಿಯುತ ಹಾಗೂ ಉತ್ತರದಾಯಿತ್ವ ಸ್ಥಾನದಲ್ಲಿರುವವರು ಸಂವೇದನಾ ರಹಿತರಾಗಿ ವರ್ತಿಸಿದರೆ ಜನ ಎಂದಿಗೂ ಕ್ಷಮಿಸಲಾರರು.
ಇತರೆ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಬೊಮ್ಮಾಯಿ ಅವರಿಗೆ ಸಿನೆಮಾ, ರಿಯಾಲಿಟಿ ಶೋಗಳ ಖಯಾಲಿ ಸ್ವಲ್ಪ ಹೆಚ್ಚೆ ಎನ್ನಬಹುದು. ಕೆಲವು ತಿಂಗಳ ಹಿಂದೆ ಖಾಸಗಿ ಕನ್ನಡ ವಾಹಿನಿಯೊಂದರ ಸಮಾರಂಭದಲ್ಲಿ ಅವರು, ಸಿನೆಮಾಗಳ ಮೇಲೆ ತಮಗಿರುವ ಪ್ರಿತಿ, ನಟರು ಹಾಗೂ ಚಿತ್ರೋದ್ಯಮದೊಂದಿಗಿನ ಒಡನಾಟದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಸಿ.ಎಂ ಪದಕ್ಕೆ " ಕಾಮನ್ ಮ್ಯಾನ್ '' ಎಂಬ ಹೊಸ ವ್ಯಾಖ್ಯಾನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಿ.ಎಂ ಬೊಮ್ಮಾಯಿ ಅವರು ಬಿಜೆಪಿ ಧ್ಯೇಯ ಧೋರಣೆ ಒಪ್ಪಿ ಪಕ್ಷ ಸೇರ್ಪಡೆಯಾಗಿ ಮುಖ್ಯಮಂತ್ರಿಯೂ ಆಗಿದ್ದಾರೆ. ಆದರೆ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳಲ್ಲಿ ಪ್ರಧಾನಿ ಮೋದಿ ಅವರನ್ನು ನೋಡಿ ಕಲಿಯಬೇಕು. ಕಮರ್ಷಿಯಲ್ ಪ್ರೊಮೋಷನ್ ಕಾರ್ಯಕ್ರಮಗಳಿಂದ ಯಾವಾಗಲೂ ದೂರವಿರುತ್ತಾರೆ. ಯಾವುದೆ ವಿವಾದಕ್ಕೂ ಅಥವಾ ರಾಜಕೀಯ ಟೀಕೆ ಟಿಪ್ಪಣಿಗೆಳಿಗೆ ಆಸ್ಪದ ನೀಡುವುದಿಲ್ಲ.
-ಪಬ್ಲಿಕ್ ನೆಕ್ಸ್ಟ್ ವಿಶೇಷ ಸಂಪಾದಕೀಯ : ಕೇಶವ ನಾಡಕರ್ಣಿ-
PublicNext
21/03/2022 04:48 pm