ಜಲಂಧರ್: ಪಂಜಾಬ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹವಣಿಕೆಯಲ್ಲಿರುವ ಎಎಪಿ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸದ್ಯ ಆ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಮೇಲೆ ಹೊಸ ತೆರಿಗೆಗಳ ಹೊರೆ ಹೇರುವುದಿಲ್ಲ ಎಂದಿದ್ದಾರೆ.
ಜಲಂಧರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮನೆ ಬಾಗಿಲಿಗೆ ಸೇವೆ ಒದಗಿಸುವ ಮೊಹಲ್ಲಾ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು. ಪಂಜಾಬ್‌ನಲ್ಲಿ 16000 ಕ್ಲಿನಿಕ್‌ಗಳನ್ನು ನಿರ್ಮಿಸುತ್ತೇವೆ ಮತ್ತು ಆಸ್ಪತ್ರೆಗಳನ್ನು ನವೀಕರಿಸುತ್ತೇವೆ. ದೆಹಲಿಯಂತೆ ಪಂಜಾಬ್ ಕೂಡ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಲಿದೆ ಎಂದು ಹೇಳಿದರು.
ಇದೇ ವೇಳೆ ಮತಾಂತರ ಕುರಿತು ಕೇಳಿಬಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಜ್ರಿವಾಲ್, ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ರಚಿಸಬೇಕು. ಧರ್ಮವು ಖಾಸಗಿ ವಿಷಯವಾಗಿದೆ. ದೇವರನ್ನು ಪೂಜಿಸುವ ಹಕ್ಕು ಎಲ್ಲರಿಗೂ ಇದೆ. ಧಾರ್ಮಿಕ ಮತಾಂತರದ ವಿರುದ್ಧ ಖಂಡಿತ ಕಾನೂನನ್ನು ರಚಿಸಬೇಕು. ಆದರೆ ಆ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಯಾವ ವ್ಯಕ್ತಿಗೂ ಕಿರುಕುಳ ನೀಡಬಾರದು. ಬೆದರಿಕೆಯೊಡ್ಡಿ ಮತಾಂತರ ಮಾಡುವುದು ತಪ್ಪು ಎಂದು ಉತ್ತರಿಸಿದ್ದಾರೆ.
PublicNext
30/01/2022 07:57 am