ಬೆಂಗಳೂರು: ಮೇಕೆದಾಟು ಪಾದಯಾತ್ರೆ ಯಶಸ್ಸಿನಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್ ಎದುರಾಗಿದೆ. ಇದು ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ತಲೆನೋವು ತಂದ ಬೆಳವಣಿಯಾಗಿದೆ ಎನ್ನಲಾಗಿದೆ.
ಮೊಹಮ್ಮದ್ ನಲಪಾಡ್ ಹಾಗೂ ಬೆಂಬಲಿಗರು ತಮ್ಮದೇ ಪಕ್ಷದವರ ಮೇಲೆ ಹಲ್ಲೆ ನಡೆಸಿದ್ರಾ? ಯುವ ಕಾಂಗ್ರೆಸ್ ಪದಾಧಿಕಾರಿಗಳ ಪಾರ್ಟಿಯಲ್ಲಿ ಹೊಡೆದಾಟ-ಬಡಿದಾಟ ನಡೆಯಿತಾ ಎನ್ನುವ ಪ್ರಶ್ನೆ ಎದ್ದಿದೆ.
ಹೌದು. ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರು ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಸದ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿರುವ ರಕ್ಷಾ ರಾಮಯ್ಯ ಅಧಿಕಾರವು ಜನವರಿ 30ರಂದು ಮುಕ್ತಾಯವಾಗಲಿದೆ. ನಂತರ ಅಧ್ಯಕ್ಷ ಸ್ಥಾನ ನಲಪಾಡ್‌ಗೆ ಹಸ್ತಾಂತರವಾಗಬೇಕಿದೆ. ಹೀಗಾಗಿ ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಲಪಾಡ್ ಡಿನ್ನರ್ ಆಯೋಜಿಸಿದ್ದರು. ಸಭೆಯಲ್ಲಿ ಎಲ್ಲಾ ಜಿಲ್ಲೆಯ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಜಟಾಪಟಿ ನಡೆದಿದೆ.
ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಅವರು ರಕ್ಷಾ ರಾಮಯ್ಯ ಬೆಂಬಲಿಗ ಎಂಬ ಕಾರಣಕ್ಕೆ ನಲಪಾಡ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಾನು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗುತ್ತಿದ್ದೇನೆ. ನೀನು ಬೇರೆಯವರಿಗೆ ಸಪೋರ್ಟ್ ಮಾಡುತ್ತೀಯಾ ಎಂದು ಆಕ್ರೋಶ ವ್ಯಕ್ತಪಡಿಸಿ, ನಲಪಾಡ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
PublicNext
20/01/2022 12:54 pm