ಲಖನೌ: ಉತ್ತರ ಪ್ರದೇಶ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯಲು ನೂರೆಂಟು ಕಸರತ್ತು ನಡೆಸಿವೆ. ಈಗಾಗಲೇ ಹಲವು ಪಕ್ಷಗಳ ನಾಯಕರು ಟೀಕಾಸ್ತ್ರ ಪ್ರಯೋಗ ಹಾಗೂ ರಾಜಕೀಯ ಕೆಸರೆರಚಾಟ ಶುರು ಹಚ್ಚಿಕೊಂಡಿದ್ದಾರೆ. ಈ ನಡುವೆ ಸಿ-ವೋಟರ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಅಚ್ಚರಿಯ ಫಲಿತಾಂಶ ನೀಡಿದೆ. 2023ರ ಆರಂಭದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರೂ ಅಧಿಕಾರವನ್ನು ಸಮೀಪಿಸಲಿದೆ.
ದೇಶದ ಅತಿಹೆಚ್ಚು ಅಸೆಂಬ್ಲಿ ಮತ್ತು ಲೋಕಸಭಾ ಸ್ಥಾನವನ್ನು ಹೊಂದಿರುವ ಉತ್ತರ ಪ್ರದೇಶದ ಅಸೆಂಬ್ಲಿ 403 ಸದಸ್ಯರನ್ನು ಹೊಂದಿದೆ. ಸಮೀಕ್ಷೆಯ ಪ್ರಕಾರ ಬಿಜೆಪಿ ಸುಮಾರು 100-108 ಸ್ಥಾನವನ್ನು ಕಳೆದುಕೊಳ್ಳಲಿದ್ದು, ಆಸುಪಾಸು 213-221 ಸ್ಥಾನವನ್ನು ಗೆಲ್ಲಲಿದೆ. ಸಮೀಕ್ಷೆಯ ಪ್ರಕಾರ ಮಾಯಾವತಿಯವರ ಬಿಎಸ್‌ಪಿ ದಯನೀಯ ವೈಫಲ್ಯವನ್ನು ಕಾಣಲಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಕಳೆದ ಚುನಾವಣೆಗಿಂತ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ನವೆಂಬರ್ ಮೊದಲ ವಾರದಲ್ಲಿ ನಡೆಸಲಾಗಿರುವ ಸಮೀಕ್ಷೆ ಇದಾಗಿದ್ದು, ಎಸ್ಪಿ 152-160 ಮತ್ತು ಬಿಎಸ್ಪಿ 16-20 ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಬಿಜೆಪಿಗೆ ಜಿದ್ದಿಗೆ ಬಿದ್ದಂತೆ ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ಪ್ರಿಯಾಂಕ ಗಾಂಧಿ ವಾಧ್ರಾ, ಕಾಂಗ್ರೆಸ್ ಪಕ್ಷಕ್ಕೆ ವೋಟ್ ಶೇರಿಂಗ್ ನಲ್ಲಿ ಸಮಾಧಾನಕರವಾದ ಫಲಿತಾಂಶವನ್ನು ತರಲಿದ್ದಾರೆ. 2017ರ ಚುನಾವಣೆಗೆ ಹೋಲಿಸಿದರೆ, ಕಾಂಗ್ರೆಸ್ ಶೇ. 2.7ರಷ್ಟು ಹೆಚ್ಚು ಮತವನ್ನು ಪಡೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಎಬಿಪಿ-ಸಿವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಲಾಭವಾಗಲಿದ್ದು, ಬಿಜೆಪಿಯ ವೈಫಲ್ಯ ಅಲ್ಲಿ ಮುಂದುವರಿಯಲಿದೆ ಮತ್ತು ಕಾಂಗ್ರೆಸ್ ಇನ್ನೊಂದು ರಾಜ್ಯವನ್ನು ಕಳೆದುಕೊಳ್ಳಲಿದೆ.
PublicNext
16/11/2021 04:52 pm