ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜಕೀಯ ಪ್ರತಿಷ್ಠೆ....ತಲುಪಿದೆ ಲಜ್ಜೆಗೇಡಿತನದ ಪರಾಕಾಷ್ಠೆ

ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ

ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯನ್ನು ಪ್ರತಿಷ್ಠೆ ಮಾಡಿಕೊಂಡಿರುವ ಮೂರೂ ಪಕ್ಷಗಳ ನಾಯಕರು "ಮೂರೂ '' ಬಿಟ್ಟವರಂತೆ ತಮ್ಮ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಇವರ ಲಜ್ಜೆಗೇಡಿತನ ಪರಾಕಾಷ್ಠೆ ತಲುಪಿದೆ.

ನಯ ವಿನಯ, ಸಭ್ಯ ನಡೆ ನುಡಿಯ ಪ್ರತೀಕದಂತಿದ್ದ ದಿ.ಸಿ.ಎಂ ಉದಾಸಿ ಹಾಗೂ ದಿ. ಎಂ.ಸಿ ಮನಗೂಳಿ ಅವರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಂಡ ರಾಜಕಾರಣಿಗಳ ಕರಾಳ ಮುಖ ಅನಾವರಣಗೊಂಡಿದೆ. ಸಭ್ಯರ ಕ್ಷೇತ್ರದಲ್ಲಿ ಅಸಭ್ಯತೆ ತಾಂಡವಾಡುತ್ತಿದೆ.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪರಸ್ಪರರನ್ನು ದೂಷಿಸುವ ಆತುರದಲ್ಲಿ, ದೇಶ ಕಂಡ ಅತ್ಯದ್ಭುತ ರಾಜಕೀಯ ಮುತ್ಸದ್ದಿ ದಿ. ಅಟಲ್ ಬಿಹಾರಿ ವಾಯಪೇಯಿ, ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡುವ ಮಟ್ಟಕ್ಕೆ ಇಳಿದಿರುವುದನ್ನು ನೋಡಿದರೆ ರಾಜಕಾರಣದ ಬಗ್ಗೆ ಜನಸಾಮಾನ್ಯರು ಹೇಸಿಗೆ ಪಟ್ಟುಕೊಳ್ಳುವಂತಾಗಿದೆ.

ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳಲ್ಲಿ ನಡೆಯುತ್ತಿರುವುದು ಕೇವಲ ಉಪಚುನಾಣೆ. ಗೆದ್ದರೆ ಕಾಂಗ್ರೆಸ್ಸಿಗೆ ಲಾಭವಿಲ್ಲ, ಸೋತರೆ ಬಿಜೆಪಿ ಹಾನಿ ಇಲ್ಲ. ಇನ್ನೂ ಜೆಡಿಎಸ್ ಗಂತೂ ಯಾವುದೇ ಫರಕು ಬೀಳುವುದಿಲ್ಲ.

ಹಾಗಾದರೆ ಈ ಮೂರು ಪಕ್ಷಗಳು ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದಿರುವುದೇಕೆ? ಕೇವಲ ಪ್ರತಿಷ್ಠೆ.

ಬಸವರಾಜ್ ಬೊಮ್ಮಾಯಿ ಸಿ.ಎಂ ಆದ ನಂತರ ಎದುರಿಸುತ್ತಿರುವ ಮೊದಲ ಚುನಾವಣೆ. ಇಲ್ಲಿಯ ಸೋಲು ಗೆಲುವು ಬೊಮ್ಮಾಯಿಗೆ ಪ್ರತಿಷ್ಠೆ ಪ್ರಶ್ನೆ. ಒಂದು ವೇಳೆ ಸೋತರೆ, ಉಪಚುನಾವಣೆ ಗೆಲ್ಲದ ಬೊಮ್ಮಾಯಿ ಇನ್ನು 2023 ರ ವಿಧಾನ ಸಭಾ ಚುನಾವಣೆ ನಾಯಕತ್ವ ಏನು ವಹಿಸುತ್ತಾರೆ ಎಂಬ ಕೊಂಕು ಮಾತುಗಳು ಬಿಜೆಪಿಯ ಪಡಸಾಲೆಯಿಂದಲೇ ಬಂದರೂ ಆಶ್ಚರ್ಯವಿಲ್ಲ. ಹೀಗಾಗಿ ಶತಾಯ ಗತಾಯ ಎರಡೂ ಸೀಟುಗಳನ್ನು ಬೊಮ್ಮಾಯಿ ಗೆಲ್ಲಿಸಿ ಕೊಡಲೇ ಬೇಕಾಗಿದೆ. ಕನಿಷ್ಟ ಹಾನಗಲ್ ಸೀಟನ್ನಾದರೂ ಉಳಿಸಿಕೊಳ್ಳುವ ಸವಾಲು ಎದುರಿಸಲೇ ಬೇಕಾಗಿದೆ.

ಮುಖ್ಯಮಂತ್ರಿ ಕುರ್ಚಿಗಾಗಿ ಈಗಲೇ ಜಂಗೀ ಕುಸ್ತಿಗೆ ಬಿದ್ದರುವ ಮಾಜಿ ಸಿ.ಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೂ ಪ್ರತಿಷ್ಠೆ ಪ್ರಶ್ನೆ. ಹೇಗಾದರೂ ಮಾಡಿ ಎರಡೂ ಸ್ಥಾನ ಗೆದ್ದು ಹೈಕಮಾಂಡ ಮುಂದೆ ಬೀಗಬೇಕಾಗಿದೆ. ಇಲ್ಲಿಯ ಸೋಲು ಗೆಲುವು ವಿಧಾನಸಭಾ ಚುನಾವಣಾ ದಿಕ್ಸೂಚಿ ಅಲ್ಲದಿದ್ದರೂ ಡಿಕೆಶಿ ನಾಯಕತ್ವ ಒರೆಗಲ್ಲಿಗೆ ಹಚ್ಚಿದಂತಾಗಿದೆ.

ಇನ್ನೂ ಚುನಾವಣಾ ಫಲಿತಾಂಶ ಏನೇ ಬಂದರೂ ಜೆಡಿಎಸ್ ಕಂಪನಿಗೆ ಫರಕು ಬೀಳುವುದಿಲ್ಲ. ಹಾನಗಲ್ ಬಗ್ಗೆ ಅಷ್ಟಾಗಿ ತಲೆಕಡಿಸಿಕೊಳ್ಳದ ಗೌಡರು, ಸಿಂದಗಿಯಲ್ಲಿ ತಮ್ಮ ಪಕ್ಷದ ಮನಗೂಳಿ ಮಗನ್ನನ್ನು ಎತ್ತಾಕಿಕೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದು ಕೆರಳಿಸಿದೆ. ತಾನು ಸೋತರೂ ಚಿಂತೆ ಇಲ್ಲ ಕಾಂಗ್ರೆಸ್ ಗೆಲ್ಲಬಾರದು ಎಂದು ಪಣ ತೊಟ್ಟಂತಿದೆ.

ಚುನಾವಣೆಗಳಲ್ಲಿ ಸೋಲು ಗೆಲುವು ಮಾಮೂಲು. ಆದರೆ ನೈತಿಕ ಅಃಧಪತನ, ಬೌದ್ಧಿ ದಿವಾಳಿ ಹೊಂದಿದ ಈ ನಾಯಕರಿಂದ ನಾವು ಉತ್ತಮ ಆಡಳಿತ ಹೇಗೆ ನಿರೀಕ್ಷಿಸಲು ಸಾಧ್ಯ.

Edited By : Nagaraj Tulugeri
PublicNext

PublicNext

21/10/2021 06:55 pm

Cinque Terre

64.09 K

Cinque Terre

8

ಸಂಬಂಧಿತ ಸುದ್ದಿ