ಉಡುಪಿ: ಪೊಲೀಸರು ಕೇಸರಿ ಉಡುಪು ಧರಿಸಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಪೊಲೀಸರ ಕೈಗೆ ತ್ರಿಶೂಲ ಕೊಟ್ಟುಬಿಡಿ ಎಂದು ಟ್ವೀಟ್ ಮಾಡಿದ್ದರು. ಸಿದ್ದರಾಮಯ್ಯ ಟ್ವೀಟ್ ಗೆ ಉಡುಪಿ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ.
"ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ?ನೀವು ಟಿಪ್ಪುವಿನ ಪೋಷಾಕು ಧರಿಸಿ, ಖಡ್ಗ ಹಿಡಿದಿಲ್ಲವೇ?
ಪಚ್ಚೆ ಶಾಲು, ಟೊಪ್ಪಿ ಧರಿಸಿದಾಗ ಭಾವೈಕ್ಯತೆ ನೆನಪಾಗಲಿಲ್ಲವೇ? ಪೊಲೀಸರು ಕೇಸರಿ ಬಟ್ಟೆ ಧರಿಸಿದರೆ ನಿಮಗೆ ಏನು ಸಮಸ್ಯೆ? ಕೇಸರಿ ತ್ಯಾಗದ ಸಂಕೇತ. ದೇಶದಲ್ಲಿ ಕೇಸರಿಯನ್ನು ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದೇವೆ.
ಅಲ್ಪಸಂಖ್ಯಾತರ ಮತಬ್ಯಾಂಕ್ ಉದ್ದೇಶವಿಟ್ಟುಕೊಂಡು ಕೇಸರಿಯನ್ನು ದ್ವೇಷಿಸಿದ್ದೀರಿ. ಕೇಸರಿಯನ್ನು ದ್ವೇಷಿಸಿದ್ದಕ್ಕೆ ಕಾಂಗ್ರೆಸ್ ಗೆ ಈ ಪರಿಸ್ಥಿತಿ ಬಂದಿದೆ. ಕೇಸರಿಯನ್ನು ವಿರೋಧಿಸಿದರೆ ಇನ್ನಷ್ಟು ಮೂಲೆ ಗುಂಪಾಗುತ್ತೀರಿ. ಹಬ್ಬದ ದಿನ ಪೊಲೀಸರು ಕೇಸರಿ ಧರಿಸಿದ್ದನ್ನು ಸಮರ್ಥಿಸುತ್ತೇನೆ. ನಮ್ಮ ರಾಷ್ಟ್ರ ಧ್ವಜದಲ್ಲಿ ಕೇಸರಿ ಬಣ್ಣ ಇದೆ. ಕೇಸರಿ ಧರಿಸಿದ್ದು ಅಪರಾಧವೇನಲ್ಲ. ಸಿದ್ದರಾಮಯ್ಯ ಮಾನಸಿಕತೆ ಈ ಟ್ವೀಟ್ನಿಂದ ಗೊತ್ತಾಗುತ್ತದೆ" ಎಂದರು.
ತ್ರಿಶೂಲ ಯಾರನ್ನೂ ಕೊಲ್ಲುವ ಆಯುಧವಲ್ಲ ಎಂದು ಹೇಳಿರುವ ಶಾಸಕ ರಘುಪತಿ ಭಟ್, "ತ್ರಿಶೂಲ ಹಿಂದೂಗಳು ಆರಾಧಿಸುವ ಆಯುಧ. ಪೊಲೀಸರಿಗೆ ತ್ರಿಶೂಲ ಕೊಡುವುದು ಒಳ್ಳೆಯ ಸಂಗತಿ. ಸಿದ್ದರಾಮಯ್ಯನವರು ಹೇಳಿರುವುದು ಸರಿಯಾಗಿದೆ" ಎಂದು ರಘುಪತಿ ಭಟ್ ವ್ಯಂಗ್ಯವಾಡಿದ್ದಾರೆ.
PublicNext
17/10/2021 07:52 pm