ದಾವಣಗೆರೆ: ರಾಜ್ಯದಲ್ಲಿ ನಡೆಯುವ ಎರಡು ಉಪಚುನಾವಣೆಯ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಂದೇ ಬರುತ್ತಾರೆ. ನಾನೇ ಖುದ್ದಾಗಿ ಬಿಎಸ್ ವೈ ಜೊತೆ ಮಾತನಾಡಿದ್ದೇನೆ. ಈ ಎರಡೂ ಕ್ಷೇತ್ರಗಳಲ್ಲಿ ಒಗ್ಗಟ್ಟಾಗಿ ಚುನಾವಣೆ ಎದುರಿಸ್ತೇವೆ. ನಾವೇ ಗೆಲ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿ. ಎಸ್. ಯಡಿಯೂರಪ್ಪರ ಚುನಾವಣಾ ಪ್ರಚಾರದ ದಿನ ನಿಗದಿಯಾಗಿದೆ. ಎರಡು ದಿನ ಹಾನಗಲ್ ಹಾಗೂ ಎರಡು ದಿನ ಸಿಂಧಗಿ ಉಪಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರ ಕ್ಯಾಂಪೈನ್ ಮಾಡಲಿದ್ದಾರೆ. ರೋಡ್ ಶೋ ಕೂಡ ನಡೆಸಲುಉದ್ದೇಶಿಸಿದ್ದು, ಇದರಲ್ಲಿಯೂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ನನ್ನ ಆತ್ಮೀಯ ಸ್ನೇಹಿತರು. ಯಾವ್ಯಾವಾಗ ಏನೇನೋ ಜ್ಞಾನೋದಯ ಅವರಿಗೆ ಆಗುತ್ತದೆ. ಯಾಕೆ ನನ್ನ ಬಗ್ಗೆಮಾತನಾಡಿದ್ದಾರೋ ಎಂಬುದು ಗೊತ್ತಿಲ್ಲ. ನಾನೇ ಯಾಕೆ ಆ ರೀತಿ ಮಾತನಾಡಿದ್ದೀಯಾ ಎಂದು ನಾನೇ ಕೇಳುತ್ತೇನೆ ಎಂಬುದಾಗಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವಿಟಿ ಕಡಿಮೆಯಾಗುತ್ತಿದೆ. ಗಡಿಭಾಗದಲ್ಲಿ ಶೇಕಡಾ 1ರೊಳಗೆ ಕೊರೊನಾ ಪಾಸಿಟಿವಿಟಿ ದರ ಇದೆ. ಆದ್ರೂ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಶಾಲೆ ಆರಂಭ, ಗಡಿಯಲ್ಲಿ ಓಡಾಟಕ್ಕೆ ಅನುಮತಿ, ನೈಟ್ ಕರ್ಫ್ಯೂ ಸಡಿಲಿಕೆ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆಯೂ ತಜ್ಞರ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಸಂಬಂಧ ನಾಳೆ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿದ ಬಳಿಕ ತೀರ್ಮಾನ ಪ್ರಕಟಿಸಲಾಗುವುದು. ತಜ್ಞರ ಅಭಿಪ್ರಾಯ ಸಂಗ್ರಹಿಸಿಯೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
PublicNext
16/10/2021 01:31 pm