ಬೆಂಗಳೂರು: ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಸಲೀಂ ಮಾತುಕತೆ ವಿಚಾರಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಉಗ್ರಪ್ಪಗೆ ಸುಮಾರು 15 ನಿಮಿಷಗಳ ಕಾಲ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಲೀಂ ಜೊತೆಗಿನ ಮಾತುಕತೆ ವಿಚಾರವಾಗಿ ಸ್ಪಷ್ಟನೆ ನೀಡಲು ಉಗ್ರಪ್ಪ ಅವರು ಕೆಪಿಸಿಸಿ ಕಚೇರಿಯ ಅಧ್ಯಕ್ಷರ ಕೊಠಡಿಗೆ ಬಂದಿದ್ದರು. ಈ ವೇಳೆ ಡಿ.ಕೆ ಶಿವಕುಮಾರ್ ಅವರು ಉಗ್ರಪ್ಪ ವಿರುದ್ಧ ಗರಂ ಆದರು. ಸ್ಪಷ್ಟನೆ ನೀಡುವುದಕ್ಕೆ ಮುಂದಾದ ಉಗ್ರಪ್ಪ ಅವರನ್ನು ತಡೆದ ಡಿ.ಕೆ.ಶಿವಕುಮಾರ್, "ಏನೂ ಹೇಳಬೇಡ ಸುಮ್ನಿರಪ್ಪ. ನಿಮ್ಮಿಂದ ಇದನ್ನ ನಾನು ನಿರೀಕ್ಷೆ ಮಾಡಿರಲಿಲ್ಲ" ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ದೆಹಲಿಯಿಂದಲೇ ಉಗ್ರಪ್ಪ ಉಚ್ಚಾಟನೆಗೆ ನೋಟಿಸ್ ಸಿದ್ಧಪಡಿಸಿದ್ದರು. ಆದರೆ ಡಿಕೆ ಶಿವಕುಮಾರ್ ಮಧ್ಯಪ್ರವೇಶದಿಂದ ಕೇವಲ ನೋಟಿಸ್ ಅಷ್ಟೇ ಜಾರಿ ಮಾಡಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ರೆಹಮಾನ್ ಖಾನ್, ಸಲೀಂ ಲೂಸ್ ಟಾಕ್ ಮಾಡಿದ್ದಾರೆ. ಹಾಗಾಗಿ ಉಚ್ಚಾಟನೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ. ಜವಾಬ್ದಾರಿ ಇರುವ ವ್ಯಕ್ತಿ ಈ ರೀತಿ ಮಾತನಾಡುವುದಿಲ್ಲ. ಹೀಗಾಗಿ ಉಚ್ಚಾಟನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
PublicNext
13/10/2021 10:53 pm