ಬೆಂಗಳೂರು: ಮಾಧ್ಯಮ ಸಂಯೋಜಕರಾಗಿದ್ದ ಸಲೀಂ ಅವರು ಆಡಿದ ಕೆಲ ಮಾತುಗಳಿಂದ ಮುಜುಗರ ಆಗಿದ್ದು ನಿಜ. ಆದರೆ ಅವರ ಆರೋಪಕ್ಕೂ ನನಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗ್ಗೆಯಿಂದ ಕೆಲವು ವಿಚಾರಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಮಾಧ್ಯಮಗೋಷ್ಠಿಯ ಸಂದರ್ಭದಲ್ಲಿ ಕೆಲವು ಆಂತರಿಕವಾದ ಸಂಭಾಷಣೆಗಳು ನಡೆದವು ಎಂಬುದನ್ನು ತೋರಿಸಿದ್ದೀರಿ. ನಾನು ಯಾವ ಪರ್ಸಂಟೇಜ್ ವಿಚಾರದಲ್ಲಿ ಭಾಗಿಯಾಗಿಲ್ಲ. ಸಲೀಂ ಮಾತನಾಡಿರುವ ವಿಚಾರ ಕಾಂಗ್ರೆಸ್ ಪಕ್ಷಕ್ಕೂ, ನನಗೂ ಸಂಬಂಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು, ಜೈಕಾರ ಹಾಕುವವರು, ಚಪ್ಪಲಿ ಎಸೆಯುವವರು, ಮೊಟ್ಟೆ ಎಸೆಯುವರು ಇರ್ತಾರೆ. ಇದು ಎಲ್ಲಾ ಪಕ್ಷಗಳಲ್ಲೂ ಇದೆ. ಸಿದ್ದರಾಮಯ್ಯ ಅವರ ಜೊತೆ ಜಗಳವೂ ಇಲ್ಲ ಏನೂ ಇಲ್ಲ. ನಾನು ಯಾವುದೇ ಗುಂಪುಗಾರಿಕೆ ನಡೆಸುವವನಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆದಿಲ್ಲ ಎಂದರು.
ನಾನು ಹಳ್ಳಿಯಿಂದ ಬಂದವನು. ನನ್ನ ಬಾಡಿ ಲ್ಯಾಂಗ್ವೇಜ್ ಬದಲಾವಣೆ ಮಾಡಲು ಸಾಧ್ಯವಿಲ್ಲ. ನನ್ನದೇ ಆದ ಶೈಲಿ ಇದೆ, ನನ್ನದೇ ಆದ ವ್ಯಕ್ತಿತ್ವ, ನನ್ನದೇ ಆದ ನಡತೆ, ನನ್ನದೇ ಆದ ಯಶಸ್ಸು ಇದೆ. ಬಿಜೆಪಿ ವಿರುದ್ಧವೂ ಅವರದ್ದೇ ಪಕ್ಷದ ನಾಯಕರು ಭ್ರಷ್ಟಾಚಾರದ ಆರೋಪ ಮಾಡಿದ್ದರು. ಪಕ್ಷ ಕ್ರಮ ಕೈಗೊಂಡಿದೆಯೇ ಎಂದು ಪ್ರಶ್ನಿಸಿದರು.
ಪಕ್ಷ ಶಿಸ್ತನ್ನು ಬಹಳ ಗಮನದಲ್ಲಿಟ್ಟುಕೊಂಡು ಶಿಸ್ತು ಪಾಲನಾ ಕಮಿಟಿ ಏನು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಕೈ ನಾಯಕರು ಹೇಳಿರುವ ವಿಚಾರದ ಕುರಿತು ನನಗೂ, ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲದೇ ಇರುವಂತಹ ವಿಚಾರವಾಗಿದೆ. ಈಗಾಗಲೇ ಉಗ್ರಪ್ಪನವರು ಪ್ರೆಸ್ ಮೀಟ್ ಏನು ಹೇಳಬೇಕೋ ಹೇಳಿದ್ದಾರೆ. ಅವರೇ ನಿಮಗೆ ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಭಾವಿಸಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಮಾಧ್ಯಮದ ಮೇಲೆ ಗೂಬೆ ಕೂರಿಸಿದ ಉಗ್ರಪ್ಪ ಅವರ ಬಗ್ಗೆ ಪ್ರಶ್ನೆ ಮಾಡಿದಾಗ, ನಾನು ಮೀಡಿಯಾ ತಪ್ಪು ಅಂತ ಯಾಕೆ ಹೇಳಿ. ನಾವು ಮಾತಾಡಿದ್ದನ್ನು ನೀವು ತೋರಿಸಿದ್ದೀರಿ. ಈ ಹಿಂದೆ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಮಾತಾಡಿದ್ರು, ತೋರಿಸಿದ್ದೀರಿ. ಇದೀಗ ಇವರು ಮಾತಾಡಿದ್ದಾರೆ ನೀವು ತೋರಿಸಿದ್ದೀರಿ. ಆದರೆ ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
PublicNext
13/10/2021 05:55 pm