ಚಿತ್ರದುರ್ಗ: ನೀರಿನ ಹಂಚಿಕೆ ವಿಚಾರದಲ್ಲಿ ಹಿಂದಿನ ಶಾಸಕರಾಗಿದ್ದ ಮಾಜಿ ಸಚಿವ ಡಿ. ಸುಧಾಕರ್ ಅವರು ಮಾತನಾಡದೇ ಮೌನವಹಿಸಿದ್ದರಿಂದ ಹಿರಿಯೂರು ತಾಲ್ಲೂಕಿಗೆ ಶಾಪವಾಗಿದೆ ಎಂದು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಧರ್ಮಪುರ ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಭದ್ರಾದಿಂದ ವಿವಿ ಸಾಗರ ಜಲಾಶಯಕ್ಕೆ 5 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಹಂಚಿಕೆಯಾದ 5 ಟಿಎಂಸಿ ನೀರಲ್ಲಿ 3 ಟಿಎಂಸಿ ನೀರು ಕಡಿತಗೊಳಿಸಿ, 2 ಟಿಎಂಸಿಗೆ ಇಳಿಸಲಾಯಿತು. ಆ ಸಂದರ್ಭದಲ್ಲಿ ಶಾಸಕರಾಗಿದ್ದ ಡಿ. ಸುಧಾಕರ್ ಅವರು ಮನುಷ್ಯನ ಬದುಕಿಗೆ ಬೇಕಾಗುವ 3 ಟಿಎಂಸಿ ನೀರನ್ನು ಬೇರೆಡೆಗೆ ತೆಗೆದುಕೊಂಡು ಹೋಗುವಾಗ ಸುಮ್ಮನಿದ್ದು, ಧ್ವನಿ ಎತ್ತದೆ, ಹೋರಾಟ ಮಾಡದೇ, ನೀರು ಹಂಚಿಕೆ ಬಗ್ಗೆ ಮಾತನಾಡದೇ ಮೌನವಹಿಸಿದ್ದರು. ಈ ಮೌನವೇ ಹಿರಿಯೂರು ತಾಲ್ಲೂಕಿಗೆ ಶಾಪವಾಗಿದೆ ಎಂದು ಸುಧಾಕರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ತಾಲ್ಲೂಕಿನ ಧರ್ಮಪುರ ಕೆರೆಗೆ ನೀರು ಹರಿಸಲು ನೂರಾರು ವರ್ಷಗಳ ಹೋರಾಟ ನಡೆಸಿಕೊಂಡು ಬಂದಿದ್ದರು. ನಾನು ಚುನಾವಣೆ ಸಂದರ್ಭದಲ್ಲಿ ಧರ್ಮಪುರ ಕೆರೆಗೆ ನೀರು ಹರಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ, ಅದರಂತೆ ನವೆಂಬರ್ ತಿಂಗಳಲ್ಲಿ ಟೆಂಡರ್ ಕರೆಯಲಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು. ನೀರು ಹರಿಸುವ ವಿಚಾರದಲ್ಲಿ ಕೆಲಸ ಆಗಿರುವುದಿಲ್ಲ ಎಂದು ಹಿಂದಿನ ಶಾಸಕರು ಹೇಳುತ್ತಾಲೇ ಬಂದಿದ್ದಾರೆ. ಕೆಲವರು ಈಗಿನ ಶಾಸಕರು ಇಲ್ಲಿ ಹುಟ್ಟಿ ಬೆಳೆದಿಲ್ಲ, ಅವರು ಬೆಂಗಳೂರಿನವರು. ಕೆರೆಯ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಾ ಬರುತ್ತಿದ್ದಾರೆ. ಮಾಡಲಿ ಬಿಡಿ, ನಾನು ಏನಿದ್ದರೂ ಅಭಿವೃದ್ಧಿಯ ಕಡೆಗೆ ಗಮನ ಹರಿಸಲಾಗಿದೆ ಎಂದರು.
PublicNext
08/10/2021 05:31 pm