ಕಲಬುರಗಿ: ಬಿಎಸ್ ವೈ ಆಪ್ತನ ಮನೆಯ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ. ಈ ಐಟಿ ರೇಡ್ ಬಿಜೆಪಿಯ ಆಂತರಿಕ ಜಗಳವನ್ನು ಎತ್ತಿ ತೋರಿಸುತ್ತದೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರ ಸ್ವಾಮಿ ಹೇಳಿದರು. ಅವರು ಕಲಬುರಗಿ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸಂದರ್ಭ ಕುಮಾರಸ್ವಾಮಿಯವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೂ ಹರಿಹಾಯ್ದರು. ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ನನಗೆ ಹೇಳೋಕೆ ಈ ಸಿದ್ದರಾಮಯ್ಯ ಯಾರು? ಅವರು ಯಾವ ದೊಣ್ಣೆ ನಾಯಕ? ಅವರ ಪರ್ಮಿಷನ್ ತಗೊಂಡು ಅಭ್ಯರ್ಥಿ ಹಾಕಬೇಕಾ? ಯಾವ ಅಭ್ಯರ್ಥಿಯನ್ನು ಎಲ್ಲಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸುತ್ತೇವೆ. ಅವರಿಗೆ ಪರಿಜ್ಞಾನವಿಲ್ಲದೆ ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡಬಾರದು. ಬಿಜೆಪಿ 105 ಸ್ಥಾನ ಗೆಲ್ಲೋಕೆ ಇದೇ ಸಿದ್ಧರಾಮಯ್ಯ ಕಾರಣ. ಜೆಡಿಎಸ್ ಪಕ್ಷ ಬಿಜೆಪಿಯ ʼಬಿʼ ಟೀಮ್ ಅಂತ ಹೇಳಿ ಅಪಪ್ರಚಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮುಸ್ಲಿಂ ಸಮಾಜ ಸಿದ್ದರಾಮಯ್ಯ ವಿರುದ್ಧ ತಿರುಗಿ ಬೀಳುತ್ತದೆ. ಪದೇ ಪದೆ ನಮ್ಮ ಪಕ್ಷದ ಅಭ್ಯರ್ಥಿಯ ಕುರಿತ ಚರ್ಚೆ ಕೈ ಬಿಟ್ಟು, ಬಿಜೆಪಿಯ ಓಟಕ್ಕೆ ಹೇಗೆ ಬ್ರೇಕ್ ಹಾಕಬೇಕೆಂಬುದನ್ನು ಸಿದ್ದರಾಮಯ್ಯ ಕಲಿಯಲಿ ಎಂದು ಚಾಟಿ ಬೀಸಿದರು.
ಈ ಮಧ್ಯೆ ಆರೆಸ್ಸೆಸ್ ಬಗ್ಗೆ ಮಾತನಾಡಿದ ಹೆಚ್ಡಿಕೆ, ʼಸ್ವಾತಂತ್ರ್ಯ ಪೂರ್ವದ ಆರೆಸ್ಸೆಸ್ ಬೇರೆ, ಈಗಿನ ಆರೆಸ್ಸೆಸ್ ಬೇರೆ. ಈಗಿನ ಆರೆಸ್ಸೆಸ್ ದೇಶವನ್ನೇ ಹಾಳು ಮಾಡುವ ಸಂಘಟನೆ. ದೇವೇಗೌಡರು ಹೇಳಿದ್ದು, ಸ್ವಾತಂತ್ರ್ಯ ಪೂರ್ವದ ಆರೆಸ್ಸೆಸ್ ಬಗ್ಗೆʼ ಎಂದರು. ಸಿದ್ದರಾಮಯ್ಯನವರು ಆರೆಸ್ಸೆಸ್ ನ್ನು ತಾಲಿಬಾನ್ ಗೆ ಹೋಲಿಸಿದ ವಿಚಾರದ ಕುರಿತು ಮಾತನಾಡಿದ ಕುಮಾರಸ್ವಾಮಿಯವರು, ʼಹೆಂಡದ ಅಂಗಡಿ ಮುಂದೆ ಕುಳಿತು ಮಾತನಾಡೋದನ್ನು ಸಿದ್ದರಾಮಯ್ಯ ಮೊದಲು ಬಿಡಲಿʼ ಎಂದು ಹೇಳಿದರು.
PublicNext
07/10/2021 01:26 pm