ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮೀಸಲಾತಿ ಪತ್ರ ಸಿಗುವವರೆಗೂ ಹೋರಾಟ; ಜಯಮೃತ್ಯುಂಜಯ ಶ್ರೀ ಘೋಷಣೆ.!

ದಾವಣಗೆರೆ: ಲಿಂಗಾಯತ ಪಂಚಮಸಾಲಿ ಸಮಾಜದ ಮಕ್ಕಳ ಕೈಯಲ್ಲಿ ಮೀಸಲಾತಿ ಪತ್ರ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ ಶ್ರೀಗಳು ಘೋಷಿಸಿದ್ದಾರೆ.

ನಗರದ ತ್ರಿಶೂಲ್ ಕಲಾಭವನದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಈ ವರ್ಷದೊಳಗೆ ಸಿಗುವ ನಿರೀಕ್ಷೆ ಇದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬೇಡಿಕೆ ಈಡೇರಿಸುವುದಾಗಿ ಹೇಳಿದ್ದಾರೆ.ನಾಳೆಯೊಳಗೆ ಮೀಸಲಾತಿ ನೀಡುವ ಬಗ್ಗೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಅಕ್ಟೋಬರ್ 1ರಂದು ಬೆಂಗಳೂರಿನ ಭಾರತೀಯ ವಿದ್ಯಾ ಮಂದಿರದಲ್ಲಿ ಪಂಚಮಸಾಲಿ, ಗೌಡ ಲಿಂಗಾಯತ, ಮಲೇಗೌಡ, ದೀಕ್ಷಾ ಲಿಂಗಾಯತರ ಪ್ರತಿಜ್ಞಾ ಪಂಚಾಯತ್ ಅಧಿವೇಶನದಲ್ಲಿ ಮುಂದೆ ಏನು ಮಾಡಬೇಕೆಂಬ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಆ ಬಳಿಕ ಹೋರಾಟಕ್ಕಿಳಿಯಲಾಗುವುದು ಎಂದು ತಿಳಿಸಿದರು.

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದ್ರೆ ಸ್ಪಷ್ಟ ಸಂದೇಶ ಬಂದಿಲ್ಲ. ಇದು ಬರುವ ನಿರೀಕ್ಷೆಯಲ್ಲಿದ್ದೇವೆ. ಬೊಮ್ಮಾಯಿಯವರು ನಿರಂತರವಾಗಿ ನಮ್ಮ ಸಂಪರ್ಕದಲ್ಲಿದ್ದು, ಸಮಾಜದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿ. ಸಿ. ಪಾಟೀಲ್ ಅವರ ಜೊತೆಯೂ ಮಾತನಾಡಿದ್ದಾರೆ. ಅರವಿಂದ್ ಬೆಲ್ಲದ್ ಸೇರಿದಂತೆ ಸಮಾಜದ ಶಾಸಕರು ಹಾಗೂ ಸಚಿವರು ಮೀಸಲಾತಿ ದೊರಕಿಸಿಕೊಡಲು ಹೋರಾಟ ಮಾಡುತ್ತಿದ್ದಾರೆ. ಜೊತೆಗೆ ಸಿಎಂ ಜೊತೆಗೆ ಈ ಸಂಬಂಧ ಸಂಪರ್ಕದಲ್ಲಿದ್ದು, ಅಕ್ಟೋಬರ್ 23ರೊಳಗೆ ಮೀಸಲಾತಿ ಸಿಗುವ ವಿಶ್ವಾಸ ಇದೆ ಎಂದು ಕೂಡಲಸಂಗಮದ ಪಂಚಮಸಾಲಿ ಸಮಾಜದ ಪೀಠಾಧಿಪತಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಆಗಿದ್ದಾಗ ಬಿ. ಎಸ್. ಯಡಿಯೂರಪ್ಪ ಅವರು ಅಧಿವೇಶನದಲ್ಲಿಯೇ ಪಂಚಮಸಾಲಿ ಸಮಾಜಕ್ಕೆ ಆರು ತಿಂಗಳೊಳಗೆ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಆದರೆ ಅದು ಈಡೇರಲಿಲ್ಲ. ಸೆಪ್ಟಂಬರ್ 15ಕ್ಕೆ ಅವರು ಕೊಟ್ಟಿದ್ದ ದಿನ ಮುಗಿದಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಹೋರಾಟಕ್ಕೆ ಇಳಿದಿದ್ದೇವೆ. ಅಧಿವೇಶನದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಈ ಬಗ್ಗೆ ಪ್ರಸ್ತಾಪ ಮಾಡಿದ್ದು, ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದ್ರೆ, ಸ್ಪಷ್ಟ ಸಂದೇಶ ಬಂದಿಲ್ಲ. ಇದು ಬರುವ ನಿರೀಕ್ಷೆಯಲ್ಲಿದ್ದೇವೆ. ಮಾಜಿ ಮುಖ್ಯಮಂತ್ರಿ ಜೆ. ಹೆಚ್. ಪಟೇಲ್ ರ ಜಯಂತಿ ಇದೆ. ಈ ವೇಳೆ ಮೀಸಲಾತಿ ಘೋಷಣೆ ಮಾಡದಿದ್ದರೆ ಏನು ಮಾಡಬೇಕು. ಒಂದು ವೇಳೆ ಸಿಎಂ ಬಂದು ಆಶ್ವಾಸನೆ ಕೊಟ್ಟರೆ, ಇಲ್ಲವೇ ಸರ್ಕಾರದ ಪ್ರತಿನಿಧಿ ಕಳುಹಿಸಿಕೊಟ್ಟು ಸ್ಪಷ್ಟ ಸಂದೇಶ ನೀಡಿದರೆ ಹೋರಾಟ ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ವಿವರಿಸಿದರು.

ಇನ್ನು ಕೆಲವರು ಎ. ಸಿ. ರೂಂನಲ್ಲಿ ಕುಳಿತು ಹೋರಾಟ ಮಾಡುತ್ತಿದ್ದಾರೆ. ಮತ್ತೆ ಕೆಲವರು ಬೀದಿಗಿಳಿದು ಮೈಚಳಿ ಬಿಟ್ಟು ಹೋರಾಡುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಜವಾಹಾರಲಾಲ್ ನೆಹರೂ ಮನೆಯಲ್ಲಿ ಕುಳಿತು ಹೋರಾಟ ಮಾಡಿದರೆ, ಮಹಾತ್ಮಾ ಗಾಂಧೀಜಿ ಅವರು ಬೀದಿಯಲ್ಲಿ ಹೋರಾಟ ಮಾಡಿದರು. ಭಗತ್ ಸಿಂಗ್ ಅವರದ್ದು ಮತ್ತೊಂದು ಬಗೆಯ ಹೋರಾಟ. ಒಟ್ಟಾರೆ ನಮ್ಮ ನಿಲುವು ಒಂದೇ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲೇಬೇಕು ಎಂಬುದು. ನಮ್ಮ ಮಕ್ಕಳಿಗೆ ತಹಶೀಲ್ದಾರ್ ಕಚೇರಿಯಿಂದ ಮೀಸಲಾತಿ ಪತ್ರ ನೀಡುವವವರೆಗೂ ನಮ್ಮ ಹೋರಾಟ ನಿಲ್ಲದು. ಅಲ್ಲಿಯವರೆಗೆ ಮುಂದುವರಿಯುತ್ತದೆ ಎಂದು ಶ್ರೀಗಳು ಘೋಷಿಸಿದರು.

Edited By : Manjunath H D
PublicNext

PublicNext

30/09/2021 04:41 pm

Cinque Terre

54.53 K

Cinque Terre

1

ಸಂಬಂಧಿತ ಸುದ್ದಿ