ದಾವಣಗೆರೆ: "ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಹುಮತ ಪಡೆಯುವುದು ಕಷ್ಟ ಆಗದು. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಅಪೇಕ್ಷೆ ಜನರದ್ದು ಇದೆ. ಆದ್ರೆ ಕರ್ನಾಟಕದಲ್ಲಿ ಅಷ್ಟು ಸುಲಭವಲ್ಲ. ಈಗಾಗಲೇ ಕಾಂಗ್ರೆಸ್ ಎದ್ದು ಕುಳಿತಿದೆ. ಎಚ್ಚರಿಕೆಯಿಂದ ನಾವು ಹೆಜ್ಜೆ ಇಡಬೇಕಿದೆ. ಯಾವುದೇ ಕಾರಣಕ್ಕೂ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನಗರದ ತ್ರಿಶೂಲ್ ಕಲಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಕಲ್ಬುರ್ಗಿ, ಬೆಳಗಾವಿ, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷೆ ಮೀರಿ ಸಾಧನೆ ಮಾಡಿದೆ. ಮುಂಬರುವ ಒಂದು ತಿಂಗಳು ಪಕ್ಷ ಸಂಘಟನೆಗೆ ಆದ್ಯತೆ ಕೊಡಬೇಕಿದೆ. ನಾನೊಬ್ಬನೇ ಪ್ರವಾಸ ಹೋಗುತ್ತಿಲ್ಲ. ಎಂಪಿ, ಶಾಸಕರು, ಎಂಎಲ್ ಸಿಗಳು ಬರುತ್ತಾರೆ. ನಾಲ್ಕೈದು ತಂಡಗಳಾಗಿ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಬಹಳಷ್ಟು ಶ್ರಮ ಹಾಕಿ ಪಕ್ಷ ಬಲಿಷ್ಠಗೊಳಿಸಬೇಕಿದೆ. ಪ್ರತಿಬೂತ್ ನಲ್ಲಿಯೂ ಮಹಿಳೆಯರನ್ನು ಗುಂಪುಗೂಡಿಸಿ ಪಕ್ಷ ಕಟ್ಟಬೇಕಿದೆ ಎಂದರಲ್ಲದೇ, ಮತ್ತೊಮ್ಮೆ ಜನರಲ್ಲಿ ವಿಶ್ವಾಸ ಮೂಡಿಸಬೇಕಾದ ಕೆಲಸ ಆಗಬೇಕು ಎಂದರು.
ದೇವಾಲಯಗಳ ತೆರವು ವಿಚಾರದಲ್ಲಿ ಈಗಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಒಂದು ವೇಳೆ ಲೋಪದೋಷವಾಗಿದ್ದರೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು. ಯಾವುದೇ ಕಾರಣಕ್ಕೂ ಎದೆಗುಂದಬೇಕಿಲ್ಲ. ಲೋಕಸಭೆಯಲ್ಲಿ ಗೆಲ್ಲಬಹುದು. ಆದ್ರೆ ರಾಜ್ಯದಲ್ಲಿ ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಾನಗಲ್ ಮತ್ತು ಸಿಂಧಗಿ ಚುನಾವಣೆ ಅಷ್ಟು ಸುಲಭವಲ್ಲ. ಭ್ರಮೆಯಲ್ಲಿರಬೇಡಿ. ಮುಂಬರುವ ಚುನಾವಣೆಗಳು ಅಗ್ನಿಪರೀಕ್ಷೆ. ಹಾಗಾಗಿ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ದಯವಿಟ್ಟು ಯಾರೂ ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ. ಅವರದ್ದೇ ಆದ ಲೆಕ್ಕಾಚಾರ ಹಾಗೂ ಶಕ್ತಿ ಅವರಿಗೆ ಇದೆ. ಬಿಜೆಪಿ ಮುಖಂಡರನ್ನು ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಹಾಗಾಗಿ ನಾವೆಲ್ಲರೂ ಎಚ್ಚರಿಕೆಯಿಂದ ಮುಂದುವರಿಯಬೇಕಿದೆ. ಕಾಂಗ್ರೆಸ್ ನವರು ನಮ್ಮ ಪಕ್ಷದ ಮುಖಂಡರನ್ನು ಸೆಳೆಯುವುದಕ್ಕೆ ಬಿಡಬಾರದು. ನಾವೆಲ್ಲರೂ ಆತ್ಮವಿಶ್ವಾಸದಿಂದ ಮುನ್ನಡೆಯಬೇಕಿದೆ. 140 ಕ್ಷೇತ್ರಗಳಲ್ಲಿ ಜಯಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕಿದೆ. ಇದಕ್ಕಾಗಿ ನಾವೆಲ್ಲರೂ ಪ್ರಯತ್ನಿಸೋಣ ಎಂದು ಕರೆ ನೀಡಿದರು.
ಸಾಧ್ಯವಾದಷ್ಟು ಬಿಜೆಪಿ ಪಕ್ಷಕ್ಕೆ ಎಸ್ಸಿ, ಎಸ್ಟಿ ಸಮುದಾಯದ ನಾಯಕರನ್ನು ಕರೆತರುವ ಕೆಲಸ ಆಗಬೇಕಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಕರೆದುಕೊಂಡು ಬಂದರೆ ಮತ್ತಷ್ಟು ಪಕ್ಷ ಶಕ್ತಿಯುತವಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ಬೂತ್ ಮಟ್ಟದಲ್ಲಿ ಕನಿಷ್ಟ 25 ಮಹಿಳೆಯರ ಮೋರ್ಚಾ ಮಾಡಿ ಪಕ್ಷ ಮತ್ತಷ್ಟು ಸದೃಢಗೊಳಿಸೋಣ ಎಂದು ಸಲಹೆ ನೀಡಿದರು.
PublicNext
19/09/2021 04:39 pm