ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದ್ದು, ಬಿಜೆಪಿಯ ಮತ್ತೊಬ್ಬ ಶಾಸಕರು ಇಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಯು ಕಳೆದ ವಿಧಾನ ಸಭಾ ಚುನಾವಣೆಗೆ ಮುಂಚೆಯೇ ಅನೇಕ ಟಿಎಂಸಿ ಶಾಸಕರು, ಸಚಿವರನ್ನು ಹೈಜಾಕ್ ಮಾಡಿತ್ತು. ಆದರೂ ಸಹ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಪರಿಣಾಮ ಟಿಎಂಸಿ ಮತ್ತೆ ಅಧಿಕಾರ ಹಿಡಿದದ್ದು, ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ ಈಗ ಅನೇಕ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಒಬ್ಬರ ಹಿಂದೆ ಒಬ್ಬರಂತೆ ಟಿಎಂಸಿ ಸೇರ್ಪಡೆಯಾಗುತ್ತಿದ್ದಾರೆ. ಈ ನಡುವೆ ಮಂಗಳವಾರ ಮತ್ತೊಬ್ಬ ಬಿಜೆಪಿ ಶಾಸಕ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ಸಾಮಾನ್ಯವಾಗಿ ಬಿಜೆಪಿ ಹೈಕಮಾಂಡ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಉತ್ತರ 24 ಪರಗಣಗಳ ಬಾಗ್ದಾದ ಬಿಜೆಪಿ ಶಾಸಕ ಬಿಸ್ವಜಿತ್ ದಾಸ್ ಇಂದು ಬಿಜೆಪಿ ತೊರೆದು ಟಿಎಂಸಿ ಸೇರಿದ್ದಾರೆ. ಕೋಲ್ಕತ್ತಾದ ಪಕ್ಷದ ಕಚೇರಿಯಲ್ಲಿ ಪಕ್ಷದ ಧ್ವಜ ಹಿಡಿದಿದ್ದಾರೆ. ಇವರೊಂದಿಗೆ ಕೌನ್ಸಿಲರ್ ಮನೋತೋಶ್ ನಾಥ್ ಮತ್ತು ಸುಬ್ರತಾ ಪಾಲ್ ಎಂಬುವವರು ಸಹ ಇಂದು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಾಗ್ದಾದ ಶಾಸಕ ಬಿಸ್ವಜಿತ್ ದಾಸ್, ಪಶ್ಚಿಮ ಬಂಗಾಳ ಚುನಾವಣೆಗೆ ಮುನ್ನ ಬಿಜೆಪಿಗ ಪಕ್ಷಾಂತರಗೊಂಡಿದ್ದರು. ಈಗ ಮತ್ತೆ ಮಾತೃ ಪಕ್ಷವನ್ನು ಸೇರುವ ಮೂಲಕ ಚುನಾವಣೆಯ ನಂತರ ಟಿಎಂಸಿಗೆ ಮರಳಿದ ಮೂರನೇ ಶಾಸಕರಾಗಿದ್ದಾರೆ. ಸೋಮವಾರ ವಿಷ್ಣುಪುರದ ಶಾಸಕ ತನ್ಮಯ್ ಘೋಷ್ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಟಿಎಂಸಿ ಬಿಟ್ಟು ಬಿಜೆಪಿ ಸೇರಿದ ಆರು ತಿಂಗಳ ಒಳಗಾಗಿ ಮತ್ತೆ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಮರಳಿದ್ದರು. ಈ ವೇಳೆ ಬಿಜೆಪಿ ಸೇಡು ತೀರಿಸಿಕೊಳ್ಳುವ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದರು.
PublicNext
31/08/2021 10:33 pm