ದಾವಣಗೆರೆ: "ಹೊನ್ನಾಳಿ ಹೊಡೆತ ಹೊಡೆಸಿಕೊಂಡವರಿಗಷ್ಟೇ ಗೊತ್ತು. ಯಾರೇ ಸಿಎಂ ಆದರೂ ಧೈರ್ಯವಾಗಿ ಭೇಟಿ ಮಾಡುವ ಶಕ್ತಿ ಕೊಟ್ಟಿದ್ದು ಹೊನ್ನಾಳಿ - ನ್ಯಾಮತಿ ತಾಲೂಕಿನ ಜನರು ನೀಡಿದ್ದಾರೆ. ಈ ಮಣ್ಣಿನ ಋಣ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನ್ಯಾಮತಿ ತಾಲ್ಲೂಕು ಘಟಕದ ನೂತನ ಕಟ್ಟಡ ಹಾಗೂ ಸಮುದಾಯ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಪ್ರವಾಹದಿಂದ ಆಗಿರುವ ಅನಾಹುತದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೆ ತಂದ ಬಳಿಕ ಅತಿವೃಷ್ಟಿ ತಾಲೂಕು ಆಗಿ ಘೋಷಿಸುವುದಾಗಿ ಹೇಳಿದ್ದು, ಇನ್ನಷ್ಟು ಅನುದಾನ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಸಿಎಂ ಬೊಮ್ಮಾಯಿ ಭೇಟಿ ಮಾಡಿದಾಗ " ತಡೆಯೋ ರೇಣುಕಾ, ಈಗಿನ್ನು ಸಿಎಂ ಆಗಿದ್ದೇನೆ ಎಂದು ಹೇಳಿದ್ದು, ನನ್ನನ್ನು ಸಹೋದರನಂತೆ ಕಂಡರು. ಯಡಿಯೂರಪ್ಪ ತಂದೆ ಸಮಾನ. ಬೊಮ್ಮಾಯಿ ಅವರು ಸಹೋದರ ಸಮಾನ. ನನ್ನನ್ನು ಅವರು ಜೊತೆಯಲ್ಲಿ ಸುತ್ತೂರು ಮಠಕ್ಕೆ ಕರೆದುಕೊಂಡು ಹೋದರು. ಅಲ್ಲಿ ಭರವಸೆ ನೀಡಿದ್ದಾರೆ. ಅವಳಿ ತಾಲೂಕಿನ ಅಭಿವೃದ್ಧಿಗೆ ಸಹಕಾರ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ನಾನು ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಅಂತಾ ಕರೆಯಲ್ಲ. ಯಾಕೆಂದರೆ ಅವರು ಡಿಸಿಎಂ ಆದಾಗಿನಿಂದಲೂ ಇಲ್ಲಿಯವರೆಗೆ ತಾಲೂಕಿಗೆ ನೂರಾರು ಯೋಜನೆ ನೀಡುವ ಜೊತೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕುಡಿಯುವ ನೀರು, ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಅಭಿವೃದ್ದಿಗಾಗಿ ಹಣ ಕೊಟ್ಟ ಮಹಾನ್ ನಾಯಕ ಎಂದು ಬಣ್ಣಿಸಿದರು.
PublicNext
21/08/2021 01:15 pm