ಬೆಳಗಾವಿ : ಮಂತ್ರಿಗಿರಿ ಸಿಗದೆ ಅತೃಪ್ತರಾಗಿರುವ ಕೆಲವು ಶಾಸಕರೊಂದಿಗೆ ಬಿಜೆಪಿ ಸರಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ಲ್ಯಾನ್ ಹಾಕಿದ್ದ ಸಿಡಿ ಖ್ಯಾತಿಯ ಗೋಕಾಕ್ ಸಾಹುಕಾರ, ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಈಗ ಸಂಪೂರ್ಣ ನಿರಾಶೆಯಾಗಿದೆ.
ಇವರ ಯಾವುದೆ ಬೆದರಿಕೆಗೂ ಬಗ್ಗದ ಬಿಜೆಪಿ ಸರಕಾರ ಒಂದು ರೀತಿ ಇವರನ್ನು ಮೂಲೆಗುಂಪು ಮಾಡಿದಂತಾಗಿದೆ. ರಾಜ್ಯದಲ್ಲಿ ಯಾವುದೇ ಸರಕಾರ ಬಂದರೂ ಜಾರಕಿಹೊಳಿ ಕುಟುಂಬದ ಯಾರಾದರೊಬ್ಬರೂ ಮಂತ್ರಿ ಆಗಿಯೇ ಆಗಿರುತ್ತಿದ್ದರು. ಹಾಗೆ ನೋಡಿದರೆ ಮೊದಲ ಬಾರಿ ಜಾರಕಿಹೊಳಿ ಎಂಬ ಹೆಸರಿಲ್ಲದ ಮೊದಲ ಮಂತ್ರಿಮಂಡಲ ಇದಾಗಿದೆ.
ಸಿಡಿ ಕೇಸ್ ನಿಂದ ತಾನು ಮುಕ್ತನಾಗುವುದು ಖಚಿತ, ಅದರಿಂದ ಹೊರ ಬಂದ ಮತ್ತೇ ಸಚಿವನಾಗುವುದಲ್ಲದೆ ಈ ಹಿಂದೆ ಹೊಂದಿದ್ದ ಜಲಸಂಪನ್ಮೂಲ ಖಾತೆಯನ್ನೆ ಪಡೆಯುತ್ತೇನೆಂದು ಆಪ್ತರ ಬಳಿ ಹೇಳಿಕೊಂಡಿದ್ದರು ರಮೇಶ್ ಜಾರಕಿಹೊಳಿ. ಆದರೆ ಇವರ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ.
ಒಂದು ವೇಳೆ ಸಿಡಿ ಕೇಸಿನಿಂದ ಹೊರಬಂದರೂ ಮಂತ್ರಿ ಸ್ಥಾನ ಸಿಗುವುದು ಖಚಿತವಿಲ್ಲ, ಸಿಕ್ಕರೂ ಜಲಸಂಪನ್ಮೂಲ ಖಾತೆಯಂತೂ ಸಿಗಲು ಸಾಧ್ಯವೇ ಇಲ್ಲ. ಏಕೆಂದರೆ ಆ ಖಾತೆ ಹಿರಿಯ ಸಚಿವ ಗೋವಿಂದ ಕಾರಜೋಳ ಪಾಲಾಗಿದೆ.
ಈಚೆಗೆ ಪತ್ರಕರ್ತರು ಸಚಿವ ಗೋವಿಂದ ಕಾರಜೋಳ ಅವರಿಗೆ " ಜಲಸಂಪನ್ಮೂಲ ಖಾತೆ ನಿಮ್ಮಲ್ಲಿಯೇ ಉಳಿಯುತ್ತೆ ಎಂಬ ಆತ್ಮವಿಶ್ವಾಸ ನಿಮಗಿದೆಯಾ '' ಎಂದು ಕೇಳಿದಾಗ ಕಾರಜೋಳ ಕೊಟ್ಟ ಉತ್ತರ ಏನು ಗೊತ್ತೆ?
" ಸರ್ಕಾರ ಎಲ್ಲಿಯವರೆಗೂ ಇರುತ್ತೊ ಅಲ್ಲಿಯವರೆಗೂ ಸಹ ಖಾತೆ ನನ್ನ ಬಳಿಯೇ ಇರುತ್ತೆ '' ಎಂದ ಮಾರ್ಮಿಕವಾಗಿ ಹೇಳಿದ್ದರು. ಅವರು ಸಹಜವಾಗಿ ಹೇಳಿದ್ದರೂ ಅದರಲ್ಲಿ ಗೂಡಾರ್ಥವಿದೆ. ಅಂದರೆ ಈ ಖಾತೆಯನ್ನು ತಮ್ಮಿಂದ ಕಿತ್ತು ಬೇರೆ ಯಾರಿಗೂ ಕೊಡಲು ಸಾಧ್ಯವಿಲ್ಲ. ಅಂದರೆ ಜಾರಕಿಹೊಳಿ ಬಿಟ್ಟು ಬೇರೆ ಯಾರೂ ಬಂದರೂ ಖಾತೆ ಹಿಂಪಡೆಯಲು ಸಾಧ್ಯವಿಲ್ಲ ಎಂಬರ್ಥದಲ್ಲಿತ್ತು.
ಅಂದರೆ ರಮೇಶ್ ಜಾರಕಿಹೊಳಿಗೆ ಬೊಮ್ಮಾಯಿ ಸಂಪುಟದಲ್ಲಿ ಸಧ್ಯಕ್ಕೆ ಸ್ಥಾನವಿಲ್ಲ ಎಂಬಂತಾಯಿತು.
PublicNext
07/08/2021 05:17 pm