ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ: ಕೇಶವ ನಾಡಕರ್ಣಿ
ಬಿ.ಎಸ್ ಯಡಿಯೂರಪ್ಪನವರ ನಂತರ ಮುಖ್ಯಮಂತ್ರಿಯಾಗಲು ಹೋಗಿ, ಕೊನೆಗೆ ಮಂತ್ರಿ ಸ್ಥಾನವನ್ನೂ ಕಳೆದುಕೊಂಡಿದ್ದಾರೆ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್.
ಸಿ.ಎಂ ರೇಸಿನಲ್ಲಿದ್ದ ಬೆಲ್ಲದ್, ಇನ್ನುಳಿದ ಸಂಭಾವ್ಯ ಅಥವಾ ಆಕಾಂಕ್ಷಿಗಳನ್ನು ಹಿಂದಿಕ್ಕಿ ಇನ್ನೇನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಯೇ ಬಿಡುತ್ತಾರೆ ಎನ್ನುವಷ್ಟು ಚಾಲ್ತಿಯಲ್ಲಿದ್ದರು. ಅದರೆ ಅವರ ನಸೀಬು ಖೊಟ್ಟಿಯಾಗಿತ್ತು.
ಸಿ.ಎಂ ಆಗದಿದ್ದರೂ ಚಿಂತೆ ಇಲ್ಲ ಕೊನೆಗೆ ಮಂತ್ರಿಯಾದರೂ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮಾಜಿ ಸಿ.ಎಂ ಯಡಿಯೂರಪ್ಪ ಅಷ್ಟು ಸುಲಭವಾಗಿ ಬಿಡುತ್ತಾರೆಯೇ?
ತಮ್ಮ ಪುತ್ರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಹೈಕಮಾಂಡ್ ಕಿವಿಯೂದಿದ್ದಾರೆ ಎಂದು ಯಡಿಯೂರಪ್ಪ ಬೆಲ್ಲದ ಕಿಡಿ ಕಾರುತ್ತಿದ್ದರು. ಇದರ ನಡುವೆ ವರಿಷ್ಠರು ಬಿಎಸ್ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂಬ ಸುದ್ದಿ ಹರಿದಾಡ ತೊಡಗಿದಾಗ, ಅರವಿಂದ ಬೆಲ್ಲದ್ ಸಹ ಸಿ.ಎಂ ಸ್ಥಾನದ ತೀವ್ರ ಸ್ಪರ್ಧಿ ಎಂದು ಮಾಧ್ಯಮಗಳಲ್ಲಿ ಬಿಂಬಿತವಾಗ ತೊಡಗಿತು.
ಬಹುಶಃ ಬೆಲ್ಲದ್ ಎಡವಿದ್ದೇ ಇಲ್ಲೆ ಎನ್ನಬಹುದು. ಎರಡು ಬಾರಿ ಆಯ್ಕೆಯಾಗಿ ಯಾವುದೇ ಇಲಾಖೆ ಮಂತ್ರಿಯಾಗಿಯೂ ಅನುಭವ ಇಲ್ಲದ ತಮಗೆ ಸಿ.ಎಂ ಹುದ್ದೆ ನಿರ್ವಹಿಸುವ ಸಾಮರ್ಥ್ಯ ಇದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು, ಮಾಧ್ಯಮಗಳು ಸೃಷ್ಠಿಸಿದ ಭ್ರಮಾ ಲೋಕಲ್ಲಿ ಮುಳುಗಿದ್ದೇ ಬೆಲ್ಲದ್ ಅವರಿಗೆ ಮುಳುವಾಯಿತು.
ಮಾಧ್ಯಮಗಳಲ್ಲಿ ಸಿ.ಎಂ ರೇಸಿನಲ್ಲಿರುವವರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಸಿಕೊಂಡಾಗಲೇ ಬೆಲ್ಲದ್ ಅದನ್ನು ತಳ್ಳಿಹಾಕಬಹುದಿತ್ತು. ಇದರಿಂದ ಮಾಜಿ ಸಿ.ಎಂ ಯಡಿಯೂರಪ್ಪನವರ ಕೋಪ ತಣ್ಣಗಾಗಿ ಕನಿಷ್ಟ ಮಂತ್ರಿ ಸ್ಥಾನಕ್ಕೆ ಪರಿಗಣಿಸಬಹುದಿತ್ತೇನೋ.
ಒಂದೆಡ್ಡೆ ಪುತ್ರನ ವಿರುದ್ಧ ವರಿಷ್ಠರಿಗೆ ದೂರು ಇನ್ನೊಂದೆಡೆ ಸಿ.ಎಂ ಹುದ್ದಗಾಗಿ ಪೈಪೋಟಿಗಿಳಿದಿದ್ದು ಯಡಿಯೂರಪ್ಪನವರಿಗೆ ಅಪಥ್ಯವಾಗಿರಬಹುದು. ಇದೆ ಕಾರಣಕ್ಕೆ ಅಡ್ಡಗಾಲು ಹಾಕಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇನ್ನು ಹೈಕಮಾಡಿಗೆ ಬೆಲ್ಲದ್ ಎಷ್ಟು ಹತ್ತಿರವಾಗ ತೊಡಗಿದ್ದರೋ ಅದಕ್ಕೆ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ದೂರವಾಗ ತೊಡಗಿದ್ದರು. ಇದೇ ಕಾರಣಕ್ಕೋ ಏನೋ ಈ ಎಲ್ಲ ಬೆಳವಣಿಗೆ ನಡೆದಾಗ ಈ ಭಾಗದ ಇಬ್ಬರೂ ನಾಯಕರು ಎಲ್ಲಿಯೂ ಬೆಲ್ಲದ್ ಗೆ ಬೆಂಬಲ ನೀಡಿದ್ದು ಕಂಡು ಬರಲಿಲ್ಲ.
ಏನಕೇನ ಪ್ರಕಾರೇಣ ಬೆಲ್ಲದ್ ಅವರಿಗೆ ತಪ್ಪಿದ ಮಂತ್ರಿ ಸ್ಥಾನ, ಬಂಡಾಯದ ನೆಲದಿಂದ ಬಂದ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಲಭಿಸಿತು. ಮುನೇನಕೊಪ್ಪ ಈ ಮೊದಲು ಯಡಿಯೂರಪ್ಪನವರ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರಿಂದ ಅವರು ಬಿಎಸ್ವೈಗೆ ತುಂಬಾ ಹತ್ತಿರವಾಗಿದ್ದರು.
ಇತ್ತ ಬಿಎಸ್ವೈ ಅವರ ಆಶೀರ್ವಾದ ಅತ್ತ ಈ ಭಾಗದ ನಾಯಕರ ಬೆಂಬಲದಿಂದ ಮುನೇನಕೊಪ್ಪಗೆ ಸಚಿವ ಸ್ಥಾನ ಒಲಿಯಿತು ಎನ್ನಬಹುದು.
ಹಿಂದೆ ಅರವಿಂದ ಅವರ ತಂದೆ ಸೌಮ್ಯ ಸ್ವಭಾವದ ಚಂದ್ರಕಾಂತ ಬೆಲ್ಲದ್ ಸಹ ಸಚಿವ ಸ್ಥಾನದಿಂದ ವಂಚಿತರಾಗಿದ್ದರು. ಇತ್ತೀಚೆಗೆ ಸಿ.ಎಂ ಸ್ಥಾನಕ್ಕೆ ಪುತ್ರ ಅರವಿಂದ ಹೆಸರು ಕೇಳಿಬಂದಾಗ ಚಂದ್ರಕಾಂತ ಬೆಲ್ಲದ್ ಪಾಪ ಖುಷಿಪಟ್ಟಿದ್ದರು.
PublicNext
04/08/2021 04:32 pm