ದಾವಣಗೆರೆ: ಆಣೆ ಪ್ರಮಾಣ ಮಾಡೋದು ಈಗೀಗ ಕಾಮನ್ ಎಂಬಂತಾಗಿಬಿಟ್ಟಿದೆ. ಈಗ ಹಳ್ಳಿಕಟ್ಟೆ ರಾಜಕಾರಣಕ್ಕೂ ಕಾಲಿಟ್ಟಿದೆ. ಹೌದು. ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಅಧಿಕಾರ ಹಿಡಿಯುವ ವೇಳೆ ಸೋತ ಅಭ್ಯರ್ಥಿಗೆ ನಾವೆಲ್ಲರೂ ಮತ ಹಾಕಿದ್ದೇವೆ ಎಂದು ಚೌಡಮ್ಮನ ಮೇಲೆ ಬಿಜೆಪಿ ಬೆಂಬಲಿತ ಸದಸ್ಯರು ಆಣೆ ಮಾಡಿದ ಪ್ರಸಂಗ ನಡೆದಿದೆ.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಅಂದುಕೊಂಡಂತೆ ಬಿಜೆಪಿ ಬೆಂಬಲಿತ ಸದಸ್ಯೆ ಆಯ್ಕೆಯಾದರು. ಆದ್ರೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅದೇ ಪಕ್ಷದ ಅಭ್ಯರ್ಥಿ ಸೋಲು ಕಂಡಿದ್ದರು. ಇದು ಅನುಮಾನಕ್ಕೆ ಕಾರಣವಾಗಿತ್ತು.
ಬಿಜೆಪಿ ಬೆಂಬಲಿತ ಸದಸ್ಯ ವೆಂಕಟರೆಡ್ಡಿ ಉಪಾಧ್ಯಕ್ಷ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ನ ಬೆಂಬಲಿತರಾಗಿ ಚಂದ್ರಪ್ಪ ಸ್ಪರ್ಧೆ ಮಾಡಿದ್ದರು. 11 ಸದಸ್ಯರ ಸಂಖ್ಯಾ ಬಲ ಹೊಂದಿದ್ದ ಚಂದ್ರಪ್ಪ ಗೆದ್ದರೆ, 12 ಸ್ಥಾನಗಳ ಬಲ ಹೊಂದಿದ್ದ ವೆಂಕಟರೆಡ್ಡಿ ಸೋಲು ಕಂಡಿದ್ದರು.
ಚುನಾವಣೆಯಲ್ಲಿ ಸೋತಿದ್ದಕ್ಕೆ ಚೌಡಮ್ಮನ ಹೆಸರಿನಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದ ಆಣೆ ಮಾಡಿಸಲಾಗಿದೆ.
"ನಾನು ದೇವಸ್ಥಾನದ ಗಂಟೆ ಹೊಡೆದು ಚೌಡಮ್ಮನ ಮೇಲೆ ಆಣೆ ಮಾಡ್ತೀನಿ. ನಾನು ವೆಂಕಟ ರೆಡ್ಡಿಗೆ ಓಟು ಹಾಕಿದ್ದು'' ಎಂಬ ಆಣೆ ಪ್ರಮಾಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಒಟ್ಟು 23 ಸದಸ್ಯರ ಬಲ ಹೊಂದಿರುವ ಭಾನುವಳ್ಳಿ ಗ್ರಾಮ ಪಂಚಾಯತ್ ಯಲ್ಲಿ ಬಿಜೆಪಿ ಬೆಂಬಲಿತರು 12, ಕಾಂಗ್ರೆಸ್ ಬೆಂಬಲಿಸಿದ್ದ ಸದಸ್ಯರಿದ್ದು, ಮತ ಹಾಕಿದ್ದನ್ನು ಖಚಿತಪಡಿಸಿಕೊಳ್ಳಲು ದೇವಿ ಸನ್ನಿಧಿಯಲ್ಲಿ ಆಣೆ ಮಾಡಿಸಲಾಗಿದೆ. 12 ಮತ ಪಡೆದು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ನೇತ್ರಾವತಿ ಆಯ್ಕೆಯಾಗಿದ್ದಾರೆ. ಆದ್ರೆ ಅದೇ ಪಕ್ಷದ ಅಭ್ಯರ್ಥಿ ವೆಂಕಟರೆಡ್ಡಿ ಸೋಲು ಕಂಡಿರುವುದು ಜೊತೆಗಿದ್ದವರಿಗೆ ಶಾಕ್ ಆಗಿತ್ತು. ಚೌಡಮ್ಮನ ಮೇಲೆ ಆಣೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಇದು ಚರ್ಚೆಗೆ ಕಾರಣವಾಗಿದೆ.
PublicNext
13/02/2021 02:02 pm