ನವದೆಹಲಿ: ಲೋಕಸಭೆಯಲ್ಲಿ ತಮ್ಮ ಭಾಷಣದ ವೇಳೆ ಮಧ್ಯಪ್ರವೇಶಿಸಿ ಅಡ್ಡಿಪಡಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಮಾತಿನ ಚಾಟಿ ಏಟು ನೀಡಿದ್ದಾರೆ.
ಲೋಕಸಭೆಯಲ್ಲಿ ಇಂದು ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ವೇಳೆ ಮಾತನಾಡಿದ ಪ್ರಧಾನಿ ಮೋದಿ, ''ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ಹೈಜಾಕ್ ಮಾಡಲಾಗಿದೆ. ಅಲ್ಲದೇ ಕೆಲ ಆಂದೋಲನ ಜೀವಿಗಳು ರೈತರ ಪವಿತ್ರ ಹೋರಾಟವನ್ನು ಕುಲಗೆಡಿಸಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
''ಪ್ರಧಾನಿ ಭಾಷಣದ ವೇಳೆ ಆಗಾಗ್ಗೆ ಅಧೀರ್ ರಂಜನ್ ಚೌಧರಿ ಅವರು ಮಧ್ಯಪ್ರವೇಶಿಸಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಅಸಮಾಧಾನಗೊಂಡ ಪ್ರಧಾನಿ ಮೋದಿ, ಅಧೀರ್ ಜಿ ನಿಮ್ಮದು ಅತಿಯಾಗುತ್ತಿದೆ. ನಿಮ್ಮ ಮೇಲೆ ಗೌರವವಿದೆ. ಇದು ಸರಿ ಕಾಣುತ್ತಿಲ್ಲ. ಯಾಕೆ ನೀವು ಹೀಗೆ ಮಾಡುತ್ತಿದ್ದೀರಿ. ನಿಮಗೆ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗಿಂತ ಹೆಚ್ಚು ಪ್ರಸಿದ್ಧಿ ಸಿಗಲಿದೆ. ತಲೆ ಕೆಡಿಸಿಕೊಳ್ಳಬೇಡಿ'' ಎಂದು ಗುಡುಗಿದರು.
ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ಸದನ ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು. ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತರಾದ ರೈತರ ಬಗ್ಗೆ ಮಾತನಾಡಲು ಪ್ರಧಾನಿ ಅವಕಾಶ ನೀಡುತ್ತಿಲ್ಲ. ಹೀಗಾಗಿ ಸಭಾತ್ಯಾಗ ಮಾಡಿದೆವು. ಎಲ್ಲರಿಗೂ ಅನುಕೂಲ ಆಗದೇ ಇದ್ದರೇ ಕಾಯ್ದೆ ಏಕೆ ತರಬೇಕಿತ್ತು ಎಂದು ಅಧೀರ್ ಹೇಳಿದ್ದಾರೆ.
PublicNext
10/02/2021 10:29 pm