ನವದೆಹಲಿ: ಕೇಂಧ್ರ ಸರ್ಕಾರ ಜಾರಿಮಾಡಿರುವ ಕೃಷಿ ಮಸೂದೆ ವಿರೋಧಿಸಿ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆಯ ಕಾವು ತಣ್ಣಗಾಗುತ್ತಿಲ್ಲ. ಇದರ ಮಧ್ಯೆ ದೇಶವು ವೃತ್ತಿಪರ ಪ್ರತಿಭಟನಾಕಾರರು ಅಥವಾ 'ಆಂದೋಲನಾ ಜೀವಿ'ಗಳ ಬಗ್ಗೆ ಎಚ್ಚರವಾಗಿರಬೇಕು ಎಂದು ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಲು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೊಸ ಪದ ಬಳಕೆ ಮಾಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು ದೇಣಿಗೆಗಳನ್ನು ಸಂಗ್ರಹಿಸುವವರನ್ನು 'ಚಂದಾಜೀವಿ'ಗಳೆಂದು ಅಥವಾ ವೃತ್ತಿಪರ ಚಂದಾ ಸಂಗ್ರಹಕಾರರು ಎಂದು ಕರೆಯಬೇಕು ಎಂದು ವ್ಯಂಗ್ಯವಾಡಿದ್ದಾರೆ. ದೇಶದಲ್ಲಿ ಪ್ರತಿಭಟನೆಗಳ ಬಗ್ಗೆ ಉಲ್ಲೇಖಿಸಿದ ಅಖಿಲೇಶ್, ಪ್ರಧಾನಿ ಮೋದಿಗೆ ಟ್ಯಾಂಗ್ ಕೊಟ್ಟಿದ್ದಾರೆ. 'ಈ ದೇಶವು ಸ್ವಾತಂತ್ರ್ಯ ಪಡೆದಿದ್ದೇ ಪ್ರತಿಭಟನೆಗಳ ಮೂಲಕ. ಪ್ರತಿಭಟನೆಗಳ ಮೂಲಕ ಅಸಂಖ್ಯಾತ ಹಕ್ಕುಗಳನ್ನು ಪಡೆದುಕೊಳ್ಳಲಾಗಿದೆ. ಮಹಿಳೆಯರು ಮತದಾನದ ಹಕ್ಕುಗಳನ್ನು ಗಳಿಸಿಕೊಂಡರು. ಆಫ್ರಿಕಾ, ಜಗತ್ತು ಮತ್ತು ಭಾರತಕ್ಕಾಗಿ ಮಹಾತ್ಮಾ ಗಾಂಧಿ ಅವರು ಪ್ರತಿಭಟನೆ ನಡೆಸಿದ್ದರಿಂದಲೇ ಅವರು ರಾಷ್ಟ್ರಪಿತ ಎನಿಸಿಕೊಂಡರು' ಎಂದು ಉದಾಹರಣೆಗಳನ್ನು ನೀಡಿದ್ದಾರೆ.
'ಪ್ರತಿಭಟನೆಗಳ ಬಗ್ಗೆ ಏನೆಂದು ಹೇಳಲಾಗುತ್ತಿದೆ? ಆ ಜನರು 'ಆಂದೋಲನ ಜೀವಿ'ಗಳು. ಹಾಗಾದರೆ ದೇಣಿಗೆಗಳನ್ನು ಸಂಗ್ರಹಿಸುತ್ತಿರುವ ಜನರು 'ಚಂದಾ ಜೀವಿ ಸಂಘಟನೆ'ಯ ಸದಸ್ಯರಲ್ಲವೇ?' ಎಂದು ರಾಮಮಂದಿರ ನಿರ್ಮಾಣಕ್ಕೆ ಚಂದಾ ಎತ್ತುತ್ತಿರುವ ಬಿಜೆಪಿ ಬೆಂಬಲಿಗರನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದಾರೆ.
'ಎಂಎಸ್ ಪಿ ಇತ್ತು, ಎಂಎಸ್ ಪಿ ಇದೆ, ಎಂಎಸ್ ಪಿ ಇರುತ್ತದೆ ಎಂಬ ಮಾತನ್ನು ನಾನು ನಿನ್ನೆ ಕೇಳಿದೆ. ಅದು ಬರಿ ಭಾಷಣಗಳಷ್ಟೇ, ಆದರೆ ವಾಸ್ತವವಲ್ಲ. ರೈತರಿಗೆ ಅದು ಸಿಗುತ್ತಿಲ್ಲ. ಅವರಿಗೆ ಸಿಗುತ್ತಿದ್ದರೆ ದೆಹಲಿಯ ರಸ್ತೆಗಳಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ದೇಶದಾದ್ಯಂತ ರೈತರನ್ನು ಎಚ್ಚರಗೊಳಿಸಿದ ಪ್ರತಿಭಟನಾನಿರತ ರೈತರನ್ನು ನಾನು ಅಭಿನಂದಿಸುತ್ತೇನೆ' ಎಂದಿದ್ದಾರೆ.
PublicNext
10/02/2021 07:55 am