ಬೆಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾವಿಧಾರಿಗಳ ಪಾಲಿನ ಕಳಂಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಎರಡು ವಾರಗಳ ಹಿಂದೆ 19 ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ಕಾಮುಖರು ಸಾಮೂಹಿಕ ಅತ್ಯಾಚಾರ ಎಸೆಗಿ, ಹಲ್ಲೆಗೈದು ನಾಲಿಗೆ ಕತ್ತರಿಸಿದ್ದರು. ಅಷ್ಟೇ ಅಲ್ಲದೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಸಂತ್ರಸ್ತೆಯ ಕುಟುಂಬಸ್ಥರಿ ಹಾಗೂ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ಪೊಲೀಸರು ಯುವತಿಯ ಅಂತ್ಯಸಂಸ್ಕಾರ ನೆರವೇರಿಸಿದ ಬಗ್ಗೆ ಟೀಕೆ ವ್ಯಕ್ತವಾಗಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರ ಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕವಾಗಿ ಅಂತ್ಯಕ್ರಿಯೆಗೂ ಅವಕಾಶ ನೀಡದೆ ಹೆತ್ತವರನ್ನು ಗೋಳಾಡಿಸಿದ ಸಿಎಂ ಯೋಗಿ ಆದಿತ್ಯನಾಥ್ ಕಾವಿಧಾರಿಗಳ ಪಾಲಿನ ಕಳಂಕ. ಒಂದು ವೇಳೆ ರಾಮ ಬದುಕಿದ್ದರೆ ಆತ ಕೂಡ ಬಿಜೆಪಿಯ ರಾವಣರನ್ನು ಉಳಿಸುತ್ತಿರಲಿಲ್ಲ. ಇವರ ಆಡಳಿತದಲ್ಲಿ ಉತ್ತರ ಪ್ರದೇಶದ ಯಾವ ಹೆಣ್ಣುಮಕ್ಕಳೂ ಸುರಕ್ಷಿತರಲ್ಲ. ಮೊದಲು ಯೋಗಿ ಆದಿತ್ಯನಾಥ್ ಅವರನ್ನು ವಜಾ ಮಾಡಿ ಎಂದು ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹೊಣೆಯನ್ನು ಕೇವಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರವಲ್ಲ, ಅವರನ್ನು ಬೆಂಬಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಸ್ತ ಸಂಘ ಪರಿವಾರದವರು ಹೊರಬೇಕಾಗುತ್ತದೆ. ತಕ್ಷಣ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತುಹಾಕಿ ಉತ್ತರ ಪ್ರದೇಶವನ್ನು ರಕ್ಷಿಸಿ ಎಂದು ಆಗ್ರಹಿಸಿದ್ದಾರೆ.
PublicNext
30/09/2020 04:00 pm