ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

75 ವರ್ಷದ ನಿಯಮ ಬಿಎಸ್ವೈ ಗೆ ಏಕೆ ಅನ್ವಯವಿಲ್ಲ? 87 ರ ಹರೆಯದ ದೇವೇಗೌಡ್ರ ಪ್ರಶ್ನೆ

ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ

ಇಷ್ಟು ವಯಸ್ಸಾದರೂ ಬಿ.ಎಸ್ ಯಡಿಯೂರಪ್ಪ ಇನ್ನೂ ಅಧಿಕಾರದ ಕುರ್ಚಿಗೆ ಏಕೆ ಅಂಟಿಕೊಂಡು ಕುಳಿತಿದ್ದಾರೋ ಗೊತ್ತಿಲ್ಲ, 75 ವರ್ಷ ಆದವರಿಗೆ ಬಿಜೆಪಿಯಲ್ಲಿ ಅಧಿಕಾರ ಇಲ್ಲ ಎಂಬ ನಿಯಮ ಇವರಿಗೆ ಅನ್ವಯವಾಗುವುದಿಲ್ಲವೆ? ಎಂದು ಮಾಜಿ ಪ್ರಧಾನಿ ದೇವೇಗೌಡ್ರು ಪ್ರಶ್ನಿಸಿದ್ದಾರೆ.

77 ವರ್ಷದ ಯಡಿಯೂರಪ್ಪ ಕೇವಲ ಅಧಿಕಾರಕ್ಕಾಗಿ ಪಕ್ಷದ ನಿಯಮಾವಳಿ ಉಲ್ಲಂಘಿಸಿದ್ದು ಸರಿಯೇ ಎಂದು, 87 ವರ್ಷದ ಮಾಜಿ ಪ್ರಧಾನಿ, ಮೂರು ಪಕ್ಷಗಳ ಆಸರೆ ಮೇಲೆ ರಾಜ್ಯಸಭಾ ಸದಸ್ಯರಾಗಿರುವ ದೊಡ್ಡ ಗೌಡ್ರು ಕೇಳಿದ್ದು ಒಂದು ರೀತಿ ಉಚಿತವೆ.

ಮುಖ್ಯಮಂತ್ರಿ ಯಡಿಯೂರಪ್ಪಗೆ ವಯಸ್ಸಾಗಿದೆ, ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಅವರ ಪುತ್ರ ಬಿ.ವೈ ವಿಜಯೇಂದ್ರ ಎರಡನೇ ಮುಖ್ಯಮಂತ್ರಿಯಂತೆ ಸರಕಾರದ ಎಲ್ಲ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಕೆಲವು ಶಾಸಕರು ಹೈಕಮಾಂಡ್ ಗೆ ದೂರು ನೀಡಿದ್ದಾರೆ ಎಂಬ ಸಂಗತಿ ಮಾಧ್ಯಮಗಳಲ್ಲಿ ಹರಿದಾಡ ತೊಡಗಿದೆ.

ಇತ್ತೀಚಿಗೆ ಯಡಿಯೂರಪ್ಪ ದೆಹಲಿಗೆ ತೆರಳಿದ ಸಂದರ್ಭದಲ್ಲಿ ಈ ವಿಷಯ ಚರ್ಚೆ ನಡೆದಿದೆ ಹಾಗೂ ಇನ್ನೂ ಕೆಲವು ದಿನ ಸಿ.ಎಂ ಹುದ್ದೆಯಲ್ಲಿ ಮುಂದುವರಿಯಲು ವರಿಷ್ಠ ಮಂಡಳಿ ಸೂಚನೆ ನೀಡಿದೆ ಎಂಬ ಹೇಳಲಾಗುತ್ತಿದೆ.

ಶಾಸಕರ ವಿರೋಧ, ಕಲಹ, ನಿಯಮಾವಳಿ ಬಿಜೆಪಿಯ ಆಂತರಿಕ ವಿಚಾರ. ಅದರೆ ಯಡಿಯೂರಪ್ಪನವರ ವಯೋಮಾನದ ಹಿನ್ನೆಲೆಯಲ್ಲಿ ಅವರ ನಾಯಕತ್ವವನ್ನು 87 ವರ್ಷ ದೇವೇಗೌಡ್ರು ಪ್ರಶ್ನಿಸಿದ್ದು ಹಾಸ್ಯಾಸ್ಪದವಾಗಿದೆ.

ಅಂದರೆ ಗೌಡ್ರು ಇನ್ನೂ ಚಿರಯೌವ್ವನಿಗರೆ? 90 ವರ್ಷ ಸಮೀಪಿಸುತ್ತಿರುವ ಇವರಿಗೆ ಇನ್ನೂ ರಾಜಕೀಯ ಮಾಡಬೇಕು, ಅಧಿಕಾರ ಅನುಭವಿಸಬೇಕು ಎಂಬ ಹಪಾಹಪಿ ಇರಬೇಕಾದರೆ, ಯಡಿಯೂರಪ್ಪನವರ ವಯಸ್ಸಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ರಾಜಕೀಯದ ವಿಡಂಬನೆಯೇ ಸರಿ.

ಬಿಜೆಪಿಯಲ್ಲಿ 75 ವರ್ಷ ಆದವರಿಗೆ ಅಧಿಕಾರ ಇಲ್ಲ ಎಂಬ ನಿಯಮವಿದೆ. ಇದೇ ಕಾರಣಕ್ಕೆ 8 ಬಾರಿ ಗೆದ್ದಿದ್ದ ಸುಮಿತ್ರಾ ಮಹಾಜನ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಆದರೆ ಯಡಿಯೂರಪ್ಪ ವಿಚಾರದಲ್ಲಿ ಏಕೆ ನಿಯಮ ಸಡಿಲಿಸಿದ್ದಾರೋ ಗೊತ್ತಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ದನಿಗೂಡಿಸಿದ್ದಾರೆ.

ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ. ತೀರಾ ವಯಸ್ಸಾಗಿದ್ದರಿಂದ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದೆ. ಆದರೆ ನನ್ನಂಥ ಅನುಭವಿಗಳ ಅವಶ್ಯಕತೆ ಇದೆ ಎಂಬ ಕಾರಣಕ್ಕೆ ಸೋನಿಯಾ ಗಾಂಧಿ ರಾಜ್ಯಸಭೆಗೆ ಬರುವಂತೆ ಒತ್ತಾಯಿಸಿದ್ದರು. ರಾಜ್ಯದ 3 ಪಕ್ಷಗಳು ಅವಿರೋಧವಾಗಿ ಒಪ್ಪಿದ್ದರಿಂದ ರಾಜ್ಯಸಭೆಗೆ ಬರಬೇಕಾಯಿತು ಎಂದು ಮಾಧ್ಯಮಗಳ ಮುಂದೆ ಗೌಡ್ರು ಹೇಳಿಕೊಂಡಿದ್ದಾರೆ.

ಹೌದು ದೇಶದ ಪ್ರಗತಿಯಲ್ಲಿ ದೇವೇಗೌಡ್ರ ಕೊಡುಗೆ ಅಪಾರವಾಗಿದೆ. ಇದೇ ಕಾರಣಕ್ಕೆ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರು, ದೇಶದ ಅತ್ಯಂತ ಹಿರಿಯ ರಾಜಕಾರಣಿ ರಾಜ್ಯಸಭೆ ಪ್ರವೇಶಿಸಿರುವುದು ನಮಗೆ ಗೌರವ ತಂದಿದೆ ಎಂದು ಪ್ರಶಂಸಿದ್ದಾರೆ.

1996 ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿ ಪ್ರಧಾನಿಯಾಗಿದ್ದ ದೇವೇಗೌಡ್ರು 24 ವರ್ಷಗಳ ನಂತರ ಎರಡನೇ ಬಾರಿ ರಾಜ್ಯಸಭಾ ಸದಸ್ಯರಾಗಿದ್ದಾರೆ.

Edited By :
PublicNext

PublicNext

21/09/2020 09:01 am

Cinque Terre

170.51 K

Cinque Terre

20

ಸಂಬಂಧಿತ ಸುದ್ದಿ