ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ, ಸರಳ ಜೀವಿ ಬಿ.ನಾರಾಯಣ್ ರಾವ್ ಇಂದು ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
ಶಾಸಕ ನಾರಾಯಣರಾವ್ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಿಂದ 61,425 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಾರಾಯಣರಾವ್ ಅವರನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ್ದರು.
ನಾರಾಯಣರಾವ್ ಅವರು 80ರ ದಶಕದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿ ಬೀದರ್‌ನಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಾ ಮಾಡಿದ್ದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 1989ರ ವಿಧಾನಸಭೆ ಚುನಾವಣೆ ವೇಳೆ ತಮ್ಮ ಪಕ್ಷದ ಟಿಕೇಟ್ ಅನ್ನು ನಾರಾಯಣರಾವ್ ಅವರಿಗೆ ನೀಡಿದ್ದರು. ಆದರೆ ಜಯ ಗಳಿಸಲು ಸಾಧ್ಯವಾಗಲಿಲ್ಲ. ನಂತರ 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತು, ಕೊನೆಗೂ 2018ರಲ್ಲಿ ಗೆದ್ದು ಶಾಸಕರಾಗಿದ್ದರು.
ಕರ್ನಾಟಕದ ಮೂವರು ಜನಪ್ರತಿನಿಧಿಗಳು ಇದುವರೆಗೂ ಕೋವಿಡ್‌ಗೆ ಬಲಿಯಾಗಿದ್ದಾರೆ. ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಅಶೋಕ್ ಗಸ್ತಿ, ಬೆಳಗಾವಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸಹ ಕೋವಿಡ್‌ಗೆ ಬಲಿಯಾಗಿದ್ದರು. ಇಂದು ಬಿ. ನಾರಾಯಣರಾವ್ ಬಲಿಯಾಗಿದ್ದಾರೆ.
PublicNext
24/09/2020 05:23 pm