ದಾವಣಗೆರೆ: ಸಿಡಿಲು ಬಡಿದ ಪರಿಣಾಮ 35 ರಿಂದ 40 ಕುರಿಗಳು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಟಿ. ಗೊಲ್ಲರಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.
ಸುಮಾರು 4 ಗಂಟೆಗಳ ಕಾಲ ಭಾರೀ ಗಾಳಿ- ಮಳೆಯೊಂದಿಗೆ ಸಿಡಿಲಿನ ಆರ್ಭಟವೂ ಜೋರಾಗಿತ್ತು. ಚಿತ್ತಪ್ಪ, ವೀರೇಶಪ್ಪ ಮತ್ತು ಕಾಟಪ್ಪ ಎಂಬವರು ಕುರಿಗಳು ಹಾಗೂ ಮೇಕೆಗಳನ್ನು ಮೇಯಿಸಲು ಹೋಗಿದ್ದರು. ಈ ವೇಳೆ ಸಿಡಿಲಿನ ಹೊಡೆತಕ್ಕೆ 35 ಕುರಿಗಳು ಅಸು ನೀಗಿವೆ.
ಇನ್ನು, ಸಿಡಿಲಿನ ಶಾಖಕ್ಕೆ ಕೆಂಚಪ್ಪ ಎಂಬವರಿಗೆ ಗಾಯವಾಗಿದ್ದು, ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೆಂಚಪ್ಪರನ್ನು ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ಮತ್ತು ತಾಲ್ಲೂಕು ಪಶು ವೈದ್ಯಾಧಿಕಾರಿಗಳು ಈ ವೇಳೆ ಹಾಜರಿದ್ದರು. ಈ ಸಂದರ್ಭ ಮಾತನಾಡಿದ ಮಾಡಾಳ್ ವಿರೂಪಾಕ್ಷಪ್ಪ, ಕುರಿಗಳು ಹಾಗೂ ಮೇಕೆಗಳು ಮೃತಪಟ್ಟ ಹಿನ್ನೆಲೆಯಲ್ಲಿ ಇವುಗಳ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.
PublicNext
29/04/2022 08:07 am