ನವದೆಹಲಿ: ಅಶ್ಲೀಲ ಸಿಡಿ ಕೇಸ್‌ನಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ಯಿಂದ ಕ್ಲೀನ್ ಚಿಟ್ ಪಡೆದಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧದ ಅಶ್ಲೀಲ ಸಿಡಿ ಪ್ರಕರಣದ ತನಿಖೆ ನಡೆಸಿ ಎಸ್‌ಐಟಿ ಸಲ್ಲಿಸಿದ್ದ ತನಿಖಾ ವರದಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಎಸ್‌ಐಟಿ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಫೆ. 3ರಂದು ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆ ನೀಡುವಂತೆ ಸಂತ್ರಸ್ತೆಯು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಸಂತ್ರಸ್ತೆ ಸಲ್ಲಿಸಿದ್ದ, ಹೈಕೋರ್ಟ್‌ನಲ್ಲಿ ವಿಲೇವಾರಿಗೆ ಬಾಕಿ ಇರುವ ಎಸ್ಐಟಿ ರಚನೆಯ ನ್ಯಾಯಬದ್ಧತೆ ಹಾಗೂ ತನಿಖೆಯ ಸಿಂಧುತ್ವ ಕುರಿತಾದ ಆಕ್ಷೇಪಣಾ ಅರ್ಜಿ ಇತ್ಯರ್ಥ ಆಗುವವರೆಗೂ, ಎಸ್ಐಟಿ ತನಿಖಾ ವರದಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ), ತನಿಖೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದರು. ತನಿಖಾಧಿಕಾರಿ ಎಸಿಪಿ ಕವಿತಾ 150 ಪುಟಗಳ ತನಿಖಾ ವರದಿಯನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸಿಡಿ ಕೇಸ್‌ನ ಸಂತ್ರಸ್ತೆಯು ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಎಸ್‌ಐಟಿ ಅಧಿಕಾರಿಗಳು, ತನಿಖೆಯ ಸಮಯದಲ್ಲಿ ಇದು ಲೈಂಗಿಕ ದೌರ್ಜನ್ಯದ ಪ್ರಕರಣ ಎಂದು ಸಾಬೀತುಪಡಿಸಲು ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಇಬ್ಬರೂ ಸಮ್ಮತಿ ಮೇರೆಗೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂದಿದ್ದರು.
PublicNext
18/02/2022 05:15 pm