ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ನಗರ ವಿಧಾನ ಪರಿಷತ್‌ ಕ್ಷೇತ್ರದ ಚುನಾವಣೆ ಫಲಿತಾಂಶಕ್ಕೆ ತಡೆ

ಬೆಂಗಳೂರು: ಆನೇಕಲ್‌, ಅತ್ತಿಬೆಲೆ ಮತ್ತು ಮಹದೇವಪುರ ಪುರಸಭೆಗೆ ನಾಮ ನಿರ್ದೇಶನಗೊಂಡಿರುವ 15 ಸದಸ್ಯರು, ಬೆಂಗಳೂರು ನಗರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾನ ಮಾಡಲು ಹೈಕೋರ್ಟ್ ಅವಕಾಶ ನೀಡಿದೆ.

ಈ ಸಂಬಂಧ ಬೆಂಗಳೂರು ನಗರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. 'ಪ್ರತಿವಾದಿ 15 ಜನ ನಾಮ ನಿರ್ದೇಶಿತ ಸದಸ್ಯರು ತಮ್ಮ ಮತಗಳನ್ನು ಚಲಾಯಿಸಬಹುದು. ಆದರೆ ಇವರ ಮತದಾನವನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಿ ಪ್ರತ್ಯೇಕ ಮತಪೆಟ್ಟಿಗೆಯಲ್ಲಿ ಇರಿಸಬೇಕು ಮತ್ತು ಫಲಿತಾಂಶವನ್ನು ಪ್ರಕಟಿಸುವಂತಿಲ್ಲ' ಎಂದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಕಾಯ್ದಿರಿಸಿ ಮಧ್ಯಂತರ ಆದೇಶ ನೀಡಿದೆ.

ಆಕ್ಷೇಪಣೆ ಏನು?:

ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿರುವುದು ಕಾನೂನು ಬಾಹಿರ. ಇದು ಜನತಾ ಪ್ರತಿನಿಧಿ ಕಾಯ್ದೆ ಮತ್ತು ಸಂವಿಧಾನದ 243 (ಆರ್‌) (2) (ಎ)(ಐ) ವಿಧಿಗೆ ವಿರುದ್ಧವಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ. ಅರ್ಜಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತರು, ಬೆಂಗಳೂರು ನಗರ ಜಿಲ್ಲೆಯ ವಿಧಾನ ಪರಿಷತ್ ಚುನಾವಣಾಧಿಕಾರಿಯೂ ಸೇರಿದಂತೆ ಒಟ್ಟು 15 ನಾಮನಿರ್ದೇಶಿತ ಸದಸ್ಯರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ನಾಮ ನಿರ್ದೇಶಿತ ಸದಸ್ಯರು: ಎಂ.ಜನಾರ್ದನ, ಕೆ.ಮಂಜುನಾಥ, ಕೆ.ಸುಧಾ ಜಾಧವ್‌, ಆರ್.ಜಗದೀಶ್, ವಿ.ನಿತಿನ್‌, ಕೆ.ಪ್ರಭಾಕರ್‌, ಕೆ.ನಟರಾಜ್‌, ಎಂ.ವೆಂಕಟೇಶ ರೆಡ್ಡಿ, ನರಸಿಂಹ ಸ್ವಾಮಿ, ಎ.ಎಂ.ರಾಜಪ್ಪ, ರಘು, ಪ್ರಕಾಶ್‌, ಬಿ.ಆರ್. ಪ್ರಸನ್ನಕುಮಾರ್, ಬಿ.ಎಂ.ಪ್ರವೀಣ್ ಕುಮಾರ್ ಹಾಗೂ ಕೆ.ಎಸ್‌. ಪ್ರದೀಪ್‌. ಅರ್ಜಿದಾರರ ಪರ ಬಿ.ಎನ್.ಸುರೇಶ್ ಬಾಬು ವಕಾಲತ್ತು ವಹಿಸಿದ್ದಾರೆ.

Edited By : Vijay Kumar
PublicNext

PublicNext

10/12/2021 12:03 pm

Cinque Terre

20.89 K

Cinque Terre

0

ಸಂಬಂಧಿತ ಸುದ್ದಿ