ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಅನುಪಸ್ಥಿತಿಯಲ್ಲಿ ಎಸ್‌ಐಟಿ ನಡೆಸಿರುವ ತನಿಖೆಯನ್ನು ತಾನು ಮರು ಪರಿಶೀಲಿಸುವ ಅಗತ್ಯವಿಲ್ಲ ಎಂದು ಎಸ್‌ಐಟಿ ಮುಖ್ಯಸ್ಥ, ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಹೈಕೋರ್ಟ್‌ಗೆ ಹೇಳಿದ್ದಾರೆ.
ಸಿಡಿ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಮತ್ತು ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾ. ಎ.ಎಸ್. ಓಕ್ ಹಾಗೂ ನ್ಯಾ. ಎನ್. ಎಸ್. ಸಂಜಯ್ ಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಪ್ರಕರಣದ ವಿಚಾರಣೆ ನಡೆದಿರುವುದಕ್ಕೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಸುದೀರ್ಘ 3 ತಿಂಗಳ ಕಾಲ ಎಸ್‌ಐಟಿ ಮುಖ್ಯಸ್ಥರು ರಜೆಯಲ್ಲಿದ್ದರು. ಹೀಗೆ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆಯಬಹುದೇ ಎಂದು ಪ್ರಶ್ನಿಸಿತು. ಅಲ್ಲದೇ ತಮ್ಮ ಅನುಪಸ್ಥಿತಿಯಲ್ಲಿ ನಡೆದ ಈವರೆಗಿನ ತನಿಖಾ ವರದಿಯನ್ನು ಪರಿಶೀಲಿಸುತ್ತಾರೆಯೇ ಎಂಬ ಬಗ್ಗೆ ಸೌಮೇಂದು ಮುಖರ್ಜಿ ಅವರ ನಿಲುವು ಕೇಳಿ ತಿಳಿಸುವಂತೆ ಎಸ್‌ಐಟಿ ಪರ ವಕೀಲರನ್ನು ನ್ಯಾಯಪೀಠ ಹೇಳಿತು.
ಅದಕ್ಕೆ ಎಸ್‌ಐಟಿ ಪರ ವಕೀಲ ಪಿ. ಪ್ರಸನ್ನ ಕುಮಾರ್ ಅವರು, "ನಾನು ಸೌಮೇಂದು ಮುಖರ್ಜಿ ಅವರೊಂದಿಗೆ ಮಾತನಾಡಿದ್ದೇವೆ. ವರದಿಯನ್ನು ತಾವು ಪರಿಶೀಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಈ ಹಿಂದೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿನ ಹೇಳಿಕೆಗೆ ಈಗಲೂ ಬದ್ಧವಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ" ಎಂದು ನ್ಯಾಯಪೀಠಕ್ಕೆ ತಿಳಿಸಿದರು.
PublicNext
13/08/2021 09:23 am