ಬೆಂಗಳೂರು: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಭೀಷ್ಮ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರನ್ನು ಖಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಈ ಮೂಲಕ 28 ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯ ಅಂತಿಮ ತೀರ್ಪಿನಲ್ಲಿ 'ಇದು ಪೂರ್ವನಿಯೋಜಿತ ಕೃತ್ಯವಲ್ಲ. ಇದೊಂದು ಆಕಸ್ಮಿಕ ಘಟನೆ' ಎಂದು ಸಿಬಿಐ ವಿಶೇಷ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾ.ಸುರೇಂದ್ರ ಕುಮಾರ್ ಯಾದವ್ ಅವರು ಎರಡು ಸಾವಿರ ಪುಟಗಳು ಇರುವ ತೀರ್ಪನ್ನು ಬರೆದಿದ್ದಾರೆ. ಈ ತೀರ್ಪಿನಿಂದಾಗಿ ಎಲ್.ಕೆ ಅಡ್ವಾಣಿ ಅವರಿಗಿದ್ದ ಎಲ್ಲ ಕಂಟಕ ಈಗ ದೂರವಾಗಿದೆ. ೩೨ ಜನ ಆರೋಪಿಗಳು ಮಸೀದಿಯನ್ನು ಧ್ವಂಸಗೊಳಿಸಲು ಕರ ಸೇವಕರಿಗೆ ಪ್ರಚೋದನೆ ನೀಡಿದ್ದರು ಎಂದು ಸಿಬಿಐ ವಾದಿಸಿತ್ತು. ಇತ್ತ ಆರೋಪಿಗಳು ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ. ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮನ್ನು ಸಿಕ್ಕಿ ಹಾಕಿಸಲು ರೂಪಿಸಿದ ರಾಜಕೀಯ ಸಂಚು ಎಂದು ವಾದ ಮಂಡಿಸಿದ್ದರು.
1992ರ ಉತ್ತರ ಪ್ರದೇಶದ ಸರ್ಕಾರ ಬಿಜೆಪಿ ನಾಯಕರು ಮತ್ತು ಕರ ಸೇವಕರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ(ಒಳ ಸಂಚು), 153 ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವ ಹೇಳಿಕೆ), 295(ಯಾವುದೇ ವರ್ಗದವರ ಮತಕ್ಕೆ ಅವಮಾನ ಮಾಡುವ ಉದ್ದೇಶದಿಂದ ಪೂಜಾ ಸ್ಥಾನಕ್ಕೆ ಧಕ್ಕೆ ಉಂಟು ಮಾಡುವುದು ಅಥವಾ ಅಪವಿತ್ರಗೊಳಿಸುವುದು), 149 ( ಒಂದೇ ಉದ್ದೇಶಕ್ಕಾಗಿ ಅಕ್ರಮ ಗುಂಪು ಸೇರುವುದು) ಹಾಗೂ 395 (ದರೋಡೆ) ಅಡಿ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿತ್ತು.
ಖುಲಾಸೆಗೆ ಕಾರಣವೇನು?: ಆರೋಪಿಗಳು ಯಾರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಅಶೋಕ್ ಸಿಂಘಾಲ್ ಮತ್ತು ಇತರ ಸಂಘ ಪರಿವಾರದ ನಾಯಕರು ಒಳಗಡೆಯಿಂದ ಮಸೀದಿ ರಕ್ಷಣೆಗೆ ಮುಂದಾಗಿದ್ದರು. ಈಗ ನೀಡಿರುವ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ಮೇಲೆ ಹೊರಿಸಲಾಗಿರುವ ಆರೋಪಗಳನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ.
PublicNext
30/09/2020 02:36 pm