ಕಟ್ಟುನಿಟ್ಟಾದ ಕೊರೊನಾ ನಿಯಮಾವಳಿಗಳಿಂದ ಮಹಾಮಾರಿ ನಿಯಂತ್ರಣಕ್ಕೆ ಬರುತ್ತಿದೆ ಅದರಲ್ಲಿ ಎರಡು ಮಾತಿಲ್ಲ. ಆದರೆ ಪದೆ ಪದೆ ಲಾಕ್ಡೌನ್ ದಿಂದ ಉತ್ತರ ಕರ್ನಾಟದ ವ್ಯಾಪಾರೋದ್ಯಮವಂತೂ ನೊಂದು, ಬೆಂದು, ಬಳಲಿ, ಬಸವಳಿದು ಹೋಗಿದೆ.
ಇದು ರಾಜ್ಯದ ಆರ್ಥಿಕ ವ್ಯವಸ್ಥೆ ಮೇಲಷ್ಟವೇ ಅಲ್ಲ ಉತ್ತರ ಕರ್ನಾಟಕದ ಅಭಿವೃದ್ಧಿ, ಬೆಳವಣಿಗೆ, ವ್ಯಾಪಾರ, ಶಿಕ್ಷಣ ವೈದ್ಯಕೀಯ ಉದ್ಯೋಗ ಸೃಷ್ಟಿಗೂ ಮರ್ಮಾಘಾತ ನೀಡಿದೆ.
ನಿಯಮ ಜಾರಿಯಲ್ಲಿ ಸರಕಾರದ ದ್ವಂದ ನಿಲುವು ಅರ್ಥವಾಗುತ್ತಿಲ್ಲ. ಕೊರೊನಾ ನಿಯಮಾವಳಿಗಳು ರಾಜ್ಯದ ಎಲ್ಲ ಮಹಾನಗರ, ಜಿಲ್ಲೆಗಳಿಗೆ ಅನ್ವಯವಾಗಿದ್ದರೆ ಚಿಂತೆ ಇಲ್ಲ. ಆದರೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಬೆಂಗಳೂರಿನಲ್ಲಿ ಮಧ್ಯರಾತ್ರಿ 12 ವರೆಗೂ ಬಾರ್ ರೆಸ್ಟೊರೆಂಟ್ ತೆರೆಯಬಹುದು. ಅಲ್ಲಿ ಜನ ವೈನ್,ಡೈನ್ ದೊಂದಿಗೆ ಮಜಾ ಮಸ್ತಿ ಮಾಡಬಹುದು.
ಆದರೆ ಪಾಪ ಹುಬ್ಬಳ್ಳಿ ಧಾರವಾಡದಂತಹ ಮಹಾನಗರದಲ್ಲಿ 9 ಗಂಟೆ ನಂತರ ಹೊಟೆಲ್ ಬಾರ್ ರಸ್ಟೊರೆಂಟ್ ಪಾನ್ ಬೀಡಾ, ಕಿರಾಣಿ, ಹಣ್ಣು ತರಕಾರಿ ಶಾಪ್ ತೆಗೆಯಬಾರದಂತೆ. ಇದೊಳ್ಳೆ ನ್ಯಾಯ?
ಯಾವ ಮಹಾತ್ಮಾ ಸರಾಯಿ ವಿರೋಧಿಸುತ್ತಿದ್ದರೂ ಅವರದೇ ಹೆಸರಿನ ಬೆಂಗಳೂರಿನ ಎಂ.ಜಿ ರಸ್ತೆ ಹಾಗೂ ಯು.ಬಿ ಸಿಟಿಯಲ್ಲಿ ರಾತ್ರಿ 9 ಗಂಟೆ ನಂತರವೂ ಬಿಂದಾಸ್ ಮದ್ಯ ಮಾರಾಟ ಮಾಂಸದೂಟವೂ ಸರಬಾರಾಜು.
ಏಕೆ ಇಲ್ಲಿ ರಾತ್ರಿ ಕರ್ಫ್ಯೂ ಬೆಂಗಳೂರಿಗೆ ಅನ್ವಯವಾಗುವುದಿಲ್ಲವೆ? ಇಲ್ಲಿಯ ವ್ಯಾಪಾರಿಗಳು ಪೊಲೀಸರೊಂದಿಗೆ ಕೊರೊನಾಕ್ಕೂ ಲಂಚ ಕೊಡುತ್ತಿದ್ದಾರೆಯೇ? ಏನೇ ಇದ್ದರೂ ಬಡಪಾಯಿ ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಮಾತ್ರ ರಾತ್ರಿ ಕರ್ಫ್ಯೂ, ಕೊರೊನಾ ನಿಯಮ ಅನ್ವಯವೆ?
ಮುಖ್ಯಮಂತ್ರಿ ಬಸರವಾಜ್ ಬೊಮ್ಮಾಯಿ ಅವರೆ ಒಂದೆರೆಡು ದಿನ ರಾತ್ರಿ ನಿಮ್ಮ ಪೊಲೀಸ್ ಅಧಿಕಾರಿಗೆ ಈ ರಸ್ತೆಗಳಲ್ಲಿ ಓಡಾಡಲು ಹೇಳಿ. ಅಂದರೆ ಅಲ್ಲಿ ನಡೆಯುತ್ತಿರುವ ಕಳ್ಳತನದ ವ್ಯವಹಾರ ಬೆಳಕಿಗೆ ಬರುತ್ತೆ.
ಒಂದು ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದಾದರೆ ಲಾಜಿಕ್ ಇಲ್ಲದ ಈ ರಾತ್ರಿ ಕರ್ಫ್ಯೂ ಎಲ್ಲೆಡೆ ರದ್ದು ಮಾಡಿ ಇನ್ನುಳಿದವರಿಗೂ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಿ. ಇಲ್ಲವಾದರೆ ವಿಶೇಷವಾಗಿ ಹೊಟೆಲ್ ಉದ್ಯಮವನ್ನೇ ನಂಬಿದವರು ಬೀದಿಗೆ ಬೀಳಬೇಕಾಗುತ್ತೆ.
PublicNext
17/09/2021 05:08 pm