ದಾವಣಗೆರೆ: ಡಿಜೆ ಬಳಸಲು ಅನುಮತಿ ನೀಡಲು ನಿರಾಕರಿಸಿದ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ದರ್ಪ ತೋರಿದ ಘಟನೆ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಡಿಯೋ ವೈರಲ್ ಆಗಿದೆ.
ಸಾರ್ವಜನಿಕವಾಗಿ ಡಿಜೆ ಬಳಸಲು ಅನುಮತಿ ನೀಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಡಿಜೆ ಬಳಸಲು ಮುಂದಾದ ಗ್ರಾಮಸ್ಥರಿಗೆ ಅಲ್ಲಿನ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರೂಪ್ಲಿ ಬಾಯಿ ಅವರು ಅನುಮತಿಯಿಲ್ಲದೆ ಡಿ.ಜೆ ಬಳಸುವ ಹಾಗಿಲ್ಲ ಎಂದು ಹೇಳಲು ಮುಂದಾಗಿದ್ದಾರೆ. ಆಗ ಮಲ್ಲಿಕಾರ್ಜುನ್‌ರವರು ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಲ್ಲದೆ ಸಾರ್ವಜನಿಕವಾಗಿ ಪೊಲೀಸರಿಗೆ ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಎಸ್‌ಪಿ ಜೊತೆ ಮತ್ತು ಸಿಎಂ ಜೊತೆ ಮಾತಾಡ್ತೇನೆ. ನಾವು ಡಿ.ಜೆ ಹಾಕಿ ಮೆರವಣಿಗೆ ಮಾಡುತ್ತೇವೆ. ನೀವು ಏನ್ ಮಾಡಿಕೊಳ್ತೀರಿ ಎಂದು ಪುಂಡಾಟಿಕೆ ಮೆರೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಶಾಸಕರ ಮಗ ಎಂದ ಮಾತ್ರಕ್ಕೆ ಕಾನೂನಿನ ಬಗ್ಗೆ ಗೌರವವೇ ಇಲ್ಲದೇ ಗೂಂಡಾಗಿರಿ ವರ್ತನೆ ತೋರಿದ ಮಾಡಾಳ್ ಮಲ್ಲಿಕಾರ್ಜುನ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ಸಾರ್ವಜನಿಕವಾಗಿ ಧಮ್ಕಿ ಹಾಕಿರುವುದಕ್ಕೆ ಸುಮೊಟೋ ಕೇಸ್ ದಾಖಲಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
PublicNext
03/09/2022 04:04 pm