ಬೆಂಗಳೂರು: ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬಂದಿವೆ. ಅಂದಾಜು 65 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಕಂಪನಿಗಳು ಬದ್ಧತೆ ತೋರಿವೆ. ಇದು ಕೈಗಾರಿಕೆ ಸ್ಥಾಪನೆಗೆ ರಾಜ್ಯ ನೀಡುತ್ತಿರುವ ಪ್ರೋತ್ಸಾಹ ಹಾಗೂ ನೀತಿ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿನ ಪೂರಕ ಪರಿಸರ, ನೀತಿ ನಿಯಮಾವಳಿ, ತಂತ್ರಜ್ಞಾನ ಆಧಾರ, ಕೌಶಲ್ಯಯುತ ಮಾನವ ಸಂಪನ್ಮೂಲ, ಆರ್ ಎಂಡ್ ಡಿ ಕೇಂದ್ರಗಳು, ಉದ್ದಿಮೆಗಳಿಗೆ ನೀಡಲಾಗುವ ಪ್ರೋತ್ಸಾಹ, ಭೂಮಿಯ ಲಭ್ಯತೆಗಳಿಂದಾಗಿ ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ ರಾಜ್ಯದ ಮೇಲೆ ವಿಶ್ವಾಸವನ್ನು ಮೂಡಿಸಿದೆ ಎಂದು ಸಿಎಂ ತಿಳಿಸಿದರು.
ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ -2022ಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹಲವು ಜಾಗತಿಕ ಉದ್ದಿಮೆದಾರರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಕರ್ನಾಟಕ ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದೆ. ಕರ್ನಾಟಕದಲ್ಲಿ ಒಟ್ಟು 65 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ವಿಶ್ವದ ಪ್ರಮುಖ ಸಂಸ್ಥೆಗಳು ಬದ್ಧತೆ ತೋರಿದ್ದು, ಸುಮಾರು 25 ಕಂಪನಿಗಳೊಂದಿಗೆ ಚರ್ಚಿಸಲಾಗಿದೆ.
ಭಾರತವನ್ನು ಹೊಸ ಆರ್ಥಿಕ ಶಕ್ತಿಯಾಗಿ ವಿಶ್ವ ಎದುರು ನೋಡುತ್ತಿದೆ. ಕರ್ನಾಟಕದ ಎಲ್ಲ ರಂಗಗಳಲ್ಲಿ ಹೂಡಿಕೆದಾರರು ಆಸಕ್ತಿ ತೋರಿದರು. ಬಂಡವಾಳ ಹೂಡಿಕೆ ಜೊತೆಗೆ ವಿಸ್ತರಣೆ ಕಾರ್ಯಕ್ಕೂ ಉತ್ಸುಕತೆ ತೋರಿದರು. ಹೈಡ್ರೋ ಪವರ್, ಏರೋಸ್ಪೇಸ್, ನವೀಕರಿಸಬಹುದಾದ ಇಂಧನ ಸೇರಿದಂತೆ ಪ್ರಮುಖ ಕ್ಷೇತ್ರದ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಬಂಡವಾಳ ಹೂಡಿಕೆಯಲ್ಲಿ ಆಸಕ್ತಿ ವಹಿಸಿದೆ. ಹವಾಮಾನ ಬದಲಾವಣೆ, ನವೀಕರಿಸಬಹುದಾದ ಇಂಧನಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು ಎಂದರು.
PublicNext
27/05/2022 05:35 pm