ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಇದೀಗ ಮತ್ತೆ ದೆಹಲಿ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ. ಏ.5ರಂದು ಕೂಡ ಸಿಎಂ ದೆಹಲಿಗೆ ತೆರಳಿದ್ದರು. ಅಲ್ಲಿಂದ ಬಂದ ನಂತರ ಈ 20- 25 ದಿನಗಳಲ್ಲಿ ಎಡಬಿಡದೆ ರಾಜ್ಯವನ್ನು ಸುತ್ತುತ್ತಿದ್ದಾರೆ. ಮುಖ್ಯಮಂತ್ರಿಯವರ ಈ ಓಡಾಟದ ಪರಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಅದರಲ್ಲೂ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ನಂತರವಂತೂ ಸಿಎಂ ಪ್ರವಾಸದ ವೇಗ ಮತ್ತಷ್ಟು ಹೆಚ್ಚಿದೆ. ಕರ್ನಾಟಕದ ಉತ್ತರದ ತುದಿ ಬೀದರ್, ಗುಲ್ಬರ್ಗ, ವಿಜಯಪುರದಿಂದ ಹಿಡಿದು ದಕ್ಷಿಣ ಕರ್ನಾಟಕ ತುದಿಯ ದಕ್ಷಿಣ ಕನ್ನಡ, ಉಡುಪಿಯ ತನಕ. ಈ ಕಡೆ ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಧಾರವಾಡ, ಹುಬ್ಬಳ್ಳಿ, ಹಾವೇರಿ, ಮಂಗಳೂರು ಸಹಿತ ಇಡೀ ರಾಜ್ಯ ಸುತ್ತುತ್ತಿದ್ದಾರೆ.
ಹೋದ ಕಡೆಗಳಲ್ಲೆಲ್ಲ ಅಭಿವೃದ್ಧಿ ಕೆಲಸಕ್ಕೆ ಗುದ್ದಲಿಪೂಜೆ, ಚಾಲನೆ, ಲೋಕಾರ್ಪಣೆ ಕಾರ್ಯಗಳಲ್ಲಿ ತೊಡಗಿದ್ದಾರೆ. ಎಲ್ಲಾ ಕಡೆಗಳಲ್ಲೂ ಆಯಾ ಭಾಗದ ಧಾರ್ಮಿಕ ಮುಖಂಡರು, ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ, ಜನತಾ ದರ್ಶನ ನಡೆಸಿದ್ದಾರೆ. ಬೆಳಗ್ಗಿನಿಂದ ಸಂಜೆ ತನಕ ನಿರಂತರ ಕಾರ್ಯಗಳಲ್ಲಿ ತೊಡಗಿಸಿದ್ಧಾರೆ.
ಹೊಸಪೇಟೆಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ಬಿಜೆಪಿ ವರಿಷ್ಠರು ಸರ್ಕಾರಕ್ಕೆ ತಗುಲಿರುವ ಅಪವಾದ ತೊಡೆದು ಹಾಕಿ, ಹಗರಣಗಳಿಂದ ಹೊರಬಂದು ಸರ್ಕಾರ ಮತ್ತು ಪಕ್ಷದ ಇಮೇಜನ್ನು ವೃದ್ಧಿಸುವ ನಿಟ್ಟಿನಲ್ಲಿ ಯಾವ ರೀತಿ ಮುಂದುವರೆಯಬೇಕು, ಚುನಾವಣೆಗೆ ಇನ್ನು ಒಂದೇ ವರ್ಷ ಮಾತ್ರ ಬಾಕಿ ಇರುವ ಈ ಸಂದರ್ಭ ಮಿಷನ್- 150 ಸಾಧಿಸಲು ಯಾವೆಲ್ಲಾ ಕಾರ್ಯತಂತ್ರ ಹೂಡಬೇಕು ಎಂಬುದನ್ನು ಸುಸ್ಪಷ್ಟವಾಗಿ ಹೇಳಿ ಟಾರ್ಗೆಟ್ ಕೊಟ್ಟಿದ್ದಾರೆ.
ಇದೆಲ್ಲವನ್ನೂ ಅತಿ ಗಂಭೀರವಾಗಿ ತೆಗೆದುಕೊಂಡಿರುವ ಸಿಎಂ, ಅದರ ಮೊದಲ ಭಾಗವಾಗಿ ಇಡೀ ರಾಜ್ಯವನ್ನು ಸುತ್ತುವ ʼಯೋಜನೆʼಯನ್ನು ಅತ್ಯಂತ ಯಶಸ್ವಿಯಾಗಿಯೇ ಪೂರೈಸಿ ಇದೀಗ ಪ್ರೊಗ್ರೆಸ್ ರಿಪೋರ್ಟ್ ಹಿಡಿದುಕೊಂಡು ದೆಹಲಿಗೆ ಹೊರಟಿದ್ದಾರೆ ಎಂದೇ ಸಿಎಂ ಅವರ ಪ್ರವಾಸವನ್ನು ವ್ಯಾಖ್ಯಾನಿಸಲಾಗುತ್ತಿದೆ.
PublicNext
28/04/2022 07:11 pm