ನವದೆಹಲಿ: ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸೌಹಾರ್ದತೆ ಹಾಗೂ ತಾಳ್ಮೆಯಿಂದ ವರ್ತಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ನವದೆಹಲಿಯಲ್ಲಿಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿವಿಧ ರಾಜ್ಯಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ತೀರ್ಪುಗಳು ಬಂದಿವೆ. ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ವಸ್ತ್ರ ಸಂಹಿತೆಯ ಬಗ್ಗೆ ವಿಚಾರಣೆ ನಡೆಯುತ್ತಿದೆ. ಸಂವಿಧಾನ ಮತ್ತು ಕಾನೂನಿನನ್ವಯ ಹೈಕೋರ್ಟ್ ಸೂಕ್ತ ತೀರ್ಪನ್ನು ನೀಡಲಿದೆ. ಎಲ್ಲಾ ವಿದ್ಯಾರ್ಥಿಗಳು ಒಟ್ಟಿಗೆ ಕೂತು ವಿದ್ಯೆ ಕಲಿಯುವಂತಾಗಬೇಕು. ವಿದ್ಯಾರ್ಥಿಗಳ ಭದ್ರ ಭವಿಷ್ಯಕ್ಕೆ ವಿದ್ಯಾರ್ಜನೆ ಬಹಳ ಮುಖ್ಯ. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ವಿಚಾರ ಅತ್ಯಂತ ಸೂಕ್ಷ್ಮವಾಗಿದ್ದು, ಯಾರೂ ಕೂಡ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಬಾರದು. ವಸ್ತ್ರ ಸಂಹಿತೆ ಜಾರಿಯ ಬಗ್ಗೆ ಉಚ್ಛನ್ಯಾಯಾಲಯದಿಂದ ತೀರ್ಪು ಬರುವವರೆಗೆ ವಿದ್ಯಾರ್ಥಿಗಳು ತಾಳ್ಮೆಯಿಂದ ವರ್ತಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆಗೂ ನಿರ್ದೇಶನ ನೀಡಲಾಗಿದೆ. ಒಟ್ಟಾರೆ ವಸ್ತ್ರಸಂಹಿತೆಯ ವಿಚಾರ ಇತ್ಯರ್ಥವಾಗುವವರೆಗೂ ಯಾರೂ ಕೂಡ ಶಾಂತಿ ಕದಡುವ ಕೆಲಸಕ್ಕೆ ಕೈಹಾಕಬಾರದು ಎಂದು ತಿಳಿಸಿದರು.
ಪ್ರತಿ ಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕರ್ನಾಟಕದಲ್ಲಿ ಆಡಳಿತ ಪಕ್ಷವಾಗಿ ಎಲ್ಲ ಜವಾಬ್ದಾರಿಗಳನ್ನು, ಕಾನೂನು ಮತ್ತು ಶಾಂತಿ ಸುವ್ಯವಸ್ಥೆಯನ್ನು ನಿರ್ವಹಿಸಲಾಗುತ್ತಿದೆ. ವಸ್ತ್ರಸಂಹಿತೆಯ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ನ್ಯಾಯಾಲಯಕ್ಕೆ ಈಗಾಗಲೇ ಸ್ಪಷ್ಟಪಡಿಸಿದ್ದು, ನ್ಯಾಯಾಲಯದ ಪರಿಶೀಲನೆಯಲ್ಲಿದೆ. ನ್ಯಾಯಾಲಯದ ತೀರ್ಪಿಗೆ ಸರ್ಕಾರ ಬದ್ಧವಾಗಿರಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ :
ರಾಜ್ಯದ ಸಂಸದರ ನಿಯೋಗದೊಂದಿಗೆ , ಕೇಂದ್ರ ಕೈಗಾರಿಕಾ ಸಚಿವ ಪಿಯುಶ್ ಗೋಯಲ್ ಅವರನ್ನು ಭೇಟಿಯಾಗಿ, ಎಫ್ ಎಂ ಸಿ ಜಿ , ಟಾಯ್ಸ್ ಕ್ಲಸ್ಟರ್ ಗೆ ಪ್ರೊಡಕ್ಷನ್ ಲಿಂಕಡ್ ಇನ್ಸೆಂಟಿವ್ಸ್ ನೀಡಲು ಮನವಿ ಸಲ್ಲಿಸಲಾಗಿದೆ. ಇದಕ್ಕೆ ಒಪ್ಪಿಗೆ ದೊರೆತಲ್ಲಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.
PublicNext
08/02/2022 07:30 pm