ಬೆಂಗಳೂರು: ಹಿಂಸಾಚಾರಗಳನ್ನು ಖಂಡಿಸಿ ಹೇಳಿಕೆ ನೀಡಿದ್ದ ನಟಿ ಸಾಯಿಪಲ್ಲವಿ ವಿವಾದಕ್ಕೊಳಗಾಗಿದ್ದರು. ನಂತರ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಹೇಳಿಕೆಯ ಬಗ್ಗೆ ಅವರು ಮತ್ತೊಂದು ಸ್ಪಷ್ಟನೆ ನೀಡಿದ್ದರು. ನಾನು ಮಾನವೀಯ ನೆಲೆಗಟ್ಟಿನಲ್ಲಿ ಹಿಂಸೆ ಹಾಗೂ ಜೀವ ತೆಗೆಯುವ ಕೃತ್ಯಗಳನ್ನು ವಿರೋಧಿಸುತ್ತೇನೆ ಎಂದಿದ್ದರು.
ಸದ್ಯ ಈ ನಟಿಯ ಬೆಂಬಲಕ್ಕೆ ನಟ ಕಿಶೋರ್ ನಿಂತಿದ್ದಾರೆ. ಮಾಧ್ಯಮ ಹಾಗೂ ಸರಕಾರಕ್ಕೆ ಹಲವು ಪ್ರಶ್ನೆಗಳನ್ನು ಎತ್ತಿರುವ ಅವರು ಸಿನಿಮಾದವರಿಗೆ ಜನಪರ ಕಾಳಜಿ ಇರೋದು ತಪ್ಪೇ? ಎಂದು ಕೇಳಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕಿರುವ ನಟ ಕಿಶೋರ್ ಸಾಯಿಪಲ್ಲವಿ ಅವರದು ಮಾನವೀಯ ನಿಲುವು ಎಂದಿದ್ದಾರೆ. ಕಿಶೋರ್ ಪೋಸ್ಟ್ ಮಾಡಿದ ಬರಹ ಈ ಕೆಳಗಿನಂತಿದೆ.
'ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೇ ಮಾಧ್ಯಮಗಳು ಯಾವಾಗಿಂದ ಈ ಕೆಲಸಕ್ಕೂ ಗುತ್ತಿಗೆ ಪಡೆದವು? ಸಿನಿಮಾದವರಿಗೆ ಜನಪರ ಕಾಳಜಿ ಇರುವುದು ತಪ್ಪೇ? ಕಾರಣ ಏನೇ ಆದರೂ ಕೊಲೆ ಮಾಡುವ ಮನಸ್ಥಿತಿ ಒಂದೇ ಹಾಗೂ ಅದು ತಪ್ಪು ಎಂದರೆ ತಪ್ಪೇ? ನಮ್ಮಲ್ಲಿನ ಅಲ್ಪಸಂಖ್ಯಾತರನ್ನು ನಾವು ಹೇಗೆ ಸಮಾನರಾಗಿ ಬದುಕಲು ಬಿಡುತ್ತೇವೆನ್ನುವುದು ನಮ್ಮ ಸಮಾಜದ ಸ್ವಾಸ್ಥ್ಯದ, ಸಭ್ಯತೆಯ ಅಳತೆಗೋಲು ಎನ್ನುವುದು ತಪ್ಪೇ? ಜೀವಕ್ಕೆ ಜಾತಿ ಧರ್ಮಗಳ ಹಂಗಿಲ್ಲವೆಂದರೆ ತಪ್ಪೇ? ಒಬ್ಬರ ಆಹಾರಕ್ರಮದ ಮೇಲೆ ನಿಷೇಧ ಹೇರಿ ಆಹಾರವನ್ನೂ ದ್ವೇಷದ ಸಾಧನವಾಗಿ ಬಳಸಬಾರದೆಂದರೆ ತಪ್ಪೇ? ಮಾನವೀಯತೆಯ ನಿಲುವಿನ ಸಾಯಿಪಲ್ಲವಿಯಿಂದ ಈ ಮಾಧ್ಯಮದವರು ಕಲಿಯಿವುದು ಸಾಕಷ್ಟಿದೆ . ಸಾಮಾಜಿಕ ಬದ್ಧತೆಯನ್ನು ಧರ್ಮಾಂಧತೆಯ ಕನ್ನಡಿಯಲ್ಲಿ ನೋಡುವ ಮಾಧ್ಯಮ ಗೋಕಾಕ್ ಚಳುವಳಿಯ ಕಾಲದಲ್ಲಿದ್ದಿದ್ದರೆ ರಾಜಕುಮಾರ್ ರವರ ಬಾಯನ್ನೂ ಮುಚ್ಚಿಸುತ್ತಿತ್ತೇನೊ..'
PublicNext
20/06/2022 06:47 pm